×
Ad

ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ನೀಡುವ ‘ಕುಸುಮ್ ಶ್ರೀ’ ಯೋಜನೆ ಜಾರಿ: ಸಚಿವ ಸುನೀಲ್ ಕುಮಾರ್

Update: 2022-10-22 18:46 IST

ಉಡುಪಿ, ಅ.22: ರಾಜ್ಯದ 3.25 ಲಕ್ಷ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 1000 ಸೋಲಾರ್ ಫೀಡರ್ ಮೂಲಕ ರೈತರ ಪಂಪ್‌ಸೆಟ್‌ಗಳಿಗೆ ನೇರ ವಿದ್ಯುತ್ ನೀಡುವ ‘ಕುಸುಮ್ ಶ್ರೀ’ ಯೋಜನೆಯನ್ನು ಕೇಂದ್ರ ಸರಕಾರದ ಸಹಕಾರದೊಂದಿಗೆ ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಇದಕ್ಕೆ ಟೆಂಡರ್ ಪ್ರಕ್ರಿಯೆಯನ್ನು ಈ ತಿಂಗಳು ಆರಂಭಿಸಲಾಗುವುದು ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಶನಿವಾರ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ರಾಜ್ಯದ 58 ವರ್ಷ ಮೇಲ್ಪಟ್ಟ ದೈವನರ್ತಕರ ಗಣತಿ ಪ್ರಕ್ರಿಯೆ ನಡೆಯುತ್ತಿದೆ. ಇಲಾಖೆ ಅಧಿಕಾರಿಗಳು ದೈವನರ್ತಕ ಸಂಘದ ಮೂಲಕ ಅವರನ್ನು ಗುರುತಿಸುವ ಕೆಲಸವನ್ನು ಮಾಡುತ್ತಾರೆ. ರಾಜ್ಯ ಸರಕಾರದ ಸುತ್ತೋಲೆ ಈಗಾಗಲೇ ಹೊರಡಿಸ ಲಾಗಿದೆ. ಸರಕಾರ ಅಭಿಯಾನ ನಡೆಸಿ ನೋಂದಣಿ ಪ್ರಕ್ರಿಯೆ ನಡೆಸಲಿದೆ. ದೈವ ನರ್ತಕರ ಸಮುದಾಯ ಭವನಕ್ಕೆ ಹಣಕಾಸಿನ ಕೊರತೆ ಇಲ್ಲ. ಸಮುದಾಯಕ್ಕೆ ಬೇಕಾದ ಚಟುವಟಿಕೆಗಳನ್ನು ಮಾಡಲು ಸರಕಾರ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಲೋಡ್ ಶೆಡ್ಡಿಂಗ್ ಇಲ್ಲ

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ದೀಪಾವಳಿಗೂ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ಬೇಸಿಗೆಯಲ್ಲಿ ಗ್ರಾಹಕರಿಗೆ ಯಾವುದೇ ಸಮಸ್ಯೆಗಳು ಆಗದಂತೆ ನಿರ್ವಹಣೆ ಮಾಡಲಾಗುವುದು. ಕಳೆದ ಮಾರ್ಚ್‌ನಲ್ಲಿ ಇತಿಹಾಸದಲ್ಲಿ ಅತಿ ಹೆಚ್ಚು 14800 ಮೆ.ವ್ಯಾಟ್ ವಿದ್ಯುತ್ ಬೇಡಿಕೆ ಬಂದಿತ್ತು. ಉತ್ಪಾದನೆ ಹೆಚ್ಚಿಸಿ ಸೂಕ್ತ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ನಿರ್ವಹಣೆಗಾಗಿ ನಮ್ಮ ಜಿಲ್ಲೆಯಲ್ಲಿ ಪ್ರತಿ ಮಂಗಳವಾರ ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ದಿನದಂದು ಪವರ್ ಕಟ್ ಮಾಡಲಾಗುತ್ತಿದೆ. ಇಡೀ ಜಿಲ್ಲೆಯ ಬದಲು ಎಲ್ಲಿ ನಿರ್ವಹಣೆ ಮಾಡುತ್ತಾರೆಯೊ ಆ ಲೈನ್‌ನಲ್ಲಿ ಮಾತ್ರ ಪವನ್ ಕಟ್ ಮಾಡುವ ಬಗ್ಗೆ ಹೊಸ ಚಿಂತನೆ ಮಾಡಲಾಗುತ್ತಿದೆ. ಈ ಕುರಿತು ತಿಂಗಳ ಕೊನೆ ವೇಳೆ ಹೊಸ ನಿರ್ಧಾರ ಪ್ರಕಟಿಸಲಾಗುವುದೆಂದು ಅವರು ಹೇಳಿದರು.

ಮೂರು ತಿಂಗಳ ಬದಲು ವರ್ಷದಲ್ಲಿ ಒಮ್ಮೆ ಮಾತ್ರ ವಿದ್ಯುತ್ ದರ ಏರಿಕೆ ಮಾಡಲು ಸಿಎಂಗೆ ಮನವಿ ನೀಡಲಾಗಿದೆ. ಸರಕಾರದ ವಿವಿಧ ಇಲಾಖೆಯಿಂದ ಇಂಧನ ಇಲಾಖೆಗೆ ಸುಮಾರು 6000 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇರಿಸಲಾಗಿದೆ. ಆ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳಿಗೆ ಪ್ರೀಪೇಡ್ ಪ್ರಿಪೈಡ್ ಮೀಟರ್ ಅಳವಡಿಕೆಗೆ ತೀರ್ಮಾನ ಮಾಡಲಾಗಿದೆ. ವಿವಿಧ ಯೋಜನೆಯ ಮೂಲಕ ಇಂಧನ ಇಲಾಖೆಯು 16 ಸಾವಿರ ಕೋಟಿ ರೂ. ಸಬ್ಸಿಡಿ ನೀಡುತ್ತಿದೆ. ಇದನ್ನು ಆರ್ಥಿಕ ಇಲಾಖೆಗೆ ಇಂಧನ ಇಲಾಖೆಗೆ ಸರಿಯಾದ ಸಮಯಕ್ಕೆ ಪಾವತಿ ಮಾಡುವಂತೆ ಕೇಂದ್ರ ಸರಕಾರ ತಿಳಿಸಿದೆ ಎಂದರು.

ಸುರತ್ಕಲ್ ಟೋಲ್ ತೆರವು

ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸುವ ಬಗ್ಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಪ್ರತಿಭಟನೆ ನಡೆದ ಬಳಿಕ ಅಧಿಕಾರಿಗಳೊಂದಿಗೆ ಜೊತೆ ಮಾತನಾಡಿದ್ದೇನೆ. ಅಧಿಕಾರಿಗಳು ನೀಡಿದ ಮಾಹಿತಿ ನವೆಂಬರ್ ತಿಂಗಳ ಕೊನೆಯಲ್ಲಿ ಈ ಟೋಲ್ ಗೇಟ್ ತೆರವುಗೊಳಿಸಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಕೇಂದ್ರ ತುಳು ಕೊಡವ ಲಂಬಾಣಿ ಎಂಟನೇ ಪರಿಚ್ಛೇಧಕ್ಕೆ ಸೇರಿಸಲು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ದೇಶದ ಒಟ್ಟು 180 ಭಾಷೆಗಳು ೮ನೇ ಪರಿಚ್ಛೇಧಕ್ಕೆ ಸೇರಿಸಲು ಕೇಂದ್ರದ ಪಟ್ಟಿಯಲ್ಲಿವೆ. ಈ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ನಾವು ಸಂಸದರ ಮೂಲಕ ನಮ್ಮ ಮೂರು ಭಾಷೆಗಳನ್ನು ಸೇರ್ಪಡೆಗೊಳಿಸಲು ಒತ್ತಡ ಹಾಕುತ್ತಿದ್ದೇವೆ ಎಂದರು.

ನನಗೆ ರಾಜಕೀಯ ಜನ್ಮ ಕೊಟ್ಟಿರುವುದು ಕಾರ್ಕಳ ಕ್ಷೇತ್ರ. ಈ ಬಾರಿಯೂ ಇಲ್ಲೇ ಚುನಾವಣೆ ಸ್ಪರ್ಧಿಸುತ್ತೇನೆ. ಬೆಂಗಳೂರು ಕ್ಷೇತ್ರದಿಂದ ನಾವು ಸ್ಪರ್ಧಿಸುತ್ತೇನೆ ಎಂಬ ಗೊಂದಲ ಮಾಡಿರುವುದು ನಾವಲ್ಲ. ಕಾರ್ಕಳ ಆನೆಕೆರೆಯ ಸುಂದರೀಕರಣ ಮಾಡುತ್ತಿದ್ದೇವೆ ಹೊರತು ಅದರ ಜಾಗವನ್ನು ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣಕ್ಕೆ ಬಳಸಿಕೊಳ್ಳುವುದಿಲ್ಲ ಎಂದ ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲ್, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಅರಾಡಿ ಉಪಸ್ಥಿತರಿದ್ದರು.

ಒತ್ತಡಕ್ಕೆ ಮಣಿದು ಪ್ರಶಸ್ತಿ ಕೊಡಲ್ಲ

ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ 28 ಸಾವಿರ ಅರ್ಜಿಗಳು ಬಂದಿವೆ. ತೆರೆಯ ಮರೆಯಲ್ಲಿರುವ ಸಾಧಕರನ್ನು ಗುರುತಿಸುವ ಪ್ರಕ್ರಿಯೆಯನ್ನು ಸಮಿತಿ ಕೈಗೆತ್ತಿಕೊಂಡಿದೆ. ಈ ಹಿಂದಿನ ವರ್ಷದಂತೆ ಈ ವರ್ಷವೂ ಅತ್ಯುತ್ತಮ ಆಯ್ಕೆ ಯನ್ನು ಮಾಡಲಾಗುವುದು. ಯಾವುದೇ ಒತ್ತಡಕ್ಕೆ ಮಣಿದು ಪ್ರಶಸ್ತಿಯನ್ನು ಯಾರಿಗೂ ನೀಡುವುದಿಲ್ಲ. ಅರ್ಹರು ಮತ್ತು ಸಾಧಕರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಕೊಡಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಹಾವೇರಿಯಲ್ಲಿ ಅದ್ಧೂರಿಯಾಗಿ ಅರ್ಥಗರ್ಭಿತವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸರಕಾರದಿಂದ ಅನುದಾನಕ್ಕೆ ಯಾವುದೇ ಕೊರತೆಗಳು ಆಗುವುದಿಲ್ಲ. ಪರಿಷತ್ತು ಮತ್ತು ಸರಕಾರದ ಮಧ್ಯೆ ವೈರುಧ್ಯ ಅಭಿಪ್ರಾಯಗಳಿಲ್ಲ. ದೀಪಾವಳಿ ಮುಗಿದ ಕೂಡಲೇ ಸಮ್ಮೇಳನದ ಪೂರ್ವ ತಯಾರಿ ಸಭೆ ನಡೆಸ ಲಾಗುವುದು. ಮುಖ್ಯಮಂತ್ರಿಗಳು ಇದಕ್ಕೆ 20 ಕೋ.ರೂ. ಅನುದಾನ ಘೋಷಿಸಿದ್ದಾರೆ ಎಂದು ಅವರು ಹೇಳಿದರು.

"ಆಡಳಿತದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕೆಂಬ ಉದ್ದೇಶದಿಂದ ಸಮಗ್ರ ಕನ್ನಡ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಿ ಸಾರ್ವಜನಿಕ ಚರ್ಚೆಗೆ ಬಿಟ್ಟಿದ್ದೇವೆ. ಬೇರೆ ಬೇರೆ ಸಂಘಟನೆಗಳು ಈ ಕುರಿತು ವಿಚಾರ ಸಂಕಿರಣ ನಡೆಸಿ ಸಲಹೆಗಳನ್ನು ಸರಕಾರಕ್ಕೆ ನೀಡುತ್ತಿದೆ. ಈ ಎಲ್ಲ ಸಲಹೆಯನ್ನು ಸಾರ್ವಜನಿಕ ಚರ್ಚೆಯ ಆಧಾರದಲ್ಲಿ ಇಟ್ಟುಕೊಂಡು ಡಿಸೆಂಬರ್‌ನಲ್ಲಿ ಈ ಮಸೂದೆಯನ್ನು ಮಂಜೂರು ಮಾಡಲಾಗುವುದು".

-ಸುನೀಲ್ ಕುಮಾರ್, ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News