ಬ್ರಿಟನ್ ಪ್ರಧಾನಿ ಗಾದಿ ಸ್ಪರ್ಧೆಗೆ ಅರ್ಹತೆ ಗಳಿಸಿದ ರಿಷಿ ಸುನಾಕ್, ಬೋರಿಸ್ ಜಾನ್ಸನ್

Update: 2022-10-22 18:30 GMT
PHOTO CREDIT: TOI

ಬ್ರಿಟನ್, ಅ.22: ಮಾಜಿ ಸಚಿವ ರಿಷಿ ಸುನಾಕ್ ಹಾಗೂ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ 100 ಕನ್ಸರ್ವೇಟಿವ್ ಸಂಸದರ ನಾಮನಿರ್ದೇಶನ ಗಳಿಸುವ ಮೂಲಕ ಪ್ರಧಾನಿ ಗಾದಿಗೆ ಸ್ಪರ್ಧಿಸಲು ಅರ್ಹರಾಗಿದ್ದಾರೆ ಎಂದು ಕನ್ಸರ್ವೇಟಿವ್ ಪಕ್ಷದ ಮೂಲಗಳು ಹೇಳಿವೆ.

 ಕೆರಿಬಿಯನ್ ದ್ವೀಪದಲ್ಲಿ ರಜೆಯ ಪ್ರವಾಸದಲ್ಲಿದ್ದ ಬೋರಿಸ್ ಜಾನ್ಸನ್, ಪ್ರವಾಸವನ್ನು ಮೊಟಕುಗೊಳಿಸಿ ಶನಿವಾರ ತರಾತುರಿಯಲ್ಲಿ ಬ್ರಿಟನ್‌ಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಆದರೆ, ಪ್ರಧಾನಿ ಗಾದಿಗೆ ಪ್ರಬಲ ಅಭ್ಯರ್ಥಿಗಳೆಂದು ಹೇಳಲಾಗಿರುವ ಸುನಾಕ್ ಅಥವಾ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದುವರೆಗೆ ತಮ್ಮ ಸ್ಪರ್ಧೆಯ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ಮಧ್ಯೆ, ಕಳೆದ ಬಾರಿ ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದ ಸಂಪುಟ ಸದಸ್ಯೆ ಪೆನ್ನೀ ಮೋರ್ಡಂಟ್ ಮತ್ತೊಮ್ಮೆ ಸ್ಪರ್ಧಿಸುವುದಾಗಿ ಅಧಿಕೃತ ಘೋಷಣೆ ಮಾಡಿದ ಪ್ರಥಮ ವ್ಯಕ್ತಿಯಾಗಿದ್ದಾರೆ. 100 ಸಂಸದರ ನಾಮನಿರ್ದೇಶನ ಗಳಿಸಿದ ಅಭ್ಯರ್ಥಿಗಳಲ್ಲಿ ಸೂಕ್ತರನ್ನು ಆಯ್ಕೆ ಮಾಡಲು ಸೋಮವಾರ ಕನ್ಸರ್ವೇಟಿವ್ ಪಕ್ಷದ 357 ಸಂಸದರು ಮತದಾನ ಮಾಡಲಿದ್ದಾರೆ. ಮತ ಎಣಿಕೆಯ ಬಳಿಕ ಇಬ್ಬರ ಮಧ್ಯೆ ನಿಕಟ ಸ್ಪರ್ಧೆ ಕಂಡುಬಂದರೆ, ಪಕ್ಷದ ಸದಸ್ಯರು ಈ ವಾರಾಂತ್ಯ ಆನ್‌ಲೈನ್ ಮತದಾನ ಮಾಡಲಿದ್ದು ಅಕ್ಟೋಬರ್ 28ರ ಒಳಗೆ ನೂತನ ಪ್ರಧಾನಿಯನ್ನು ಘೋಷಿಸುವ ನಿರೀಕ್ಷೆಯಿದೆ.ಈ ಮಧ್ಯೆ, ಸುನಾಕ್ ಮತ್ತು ಜಾನ್ಸನ್ ಮಧ್ಯೆ ಒಪ್ಪಂದ ಮೂಡಿಸುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News