ರಾಜೀವ್ ಗಾಂಧಿ ಪ್ರತಿಷ್ಠಾನದ ವಿದೇಶಿ ಕೊಡುಗೆ ಪರವಾನಗಿ ರದ್ದುಗೊಳಿಸಿದ ಕೇಂದ್ರ
ಹೊಸದಿಲ್ಲಿ,ಆ.24: ವಿದೇಶಿ ದೇಣಿಗೆ ಸ್ವೀಕಾರದಲ್ಲಿ ಅಕ್ರಮಗಳು ನಡೆದಿವೆಯೆಂಬ ಆರೋಪಕ್ಕೆಸಂಬಂಧಿಸಿ ಗಾಂಧಿ ಕುಟುಂಬದ ಜೊತೆ ನಂಟು ಹೊಂದಿರುವ ಎನ್‌ಜಿಓ ಸಂಸ್ಥೆಗಳಾದ ರಾಜೀವ್ ಗಾಂಧಿ ಪ್ರತಿಷ್ಠಾನ (ಆರ್‌ಜಿಎಫ್) ಹಾಗೂ ದಿ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ (ಆರ್‌ಜಿಸಿಟಿ)ಗಳ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಯ ಪರವಾನಗಿಯನ್ನು ಕೇಂದ್ರ ಸರಕಾರವು ರದ್ದುಪಡಿಸಿದೆಯೆಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಆರ್‌ಜಿಎಫ್ ಹಾಗೂ ಆರ್‌ಜಿಸಿಟಿಗಳಲ್ಲಿ ನಡೆದಿದೆಯೆನ್ನಲಾದ ಅಕ್ರಮಗಳ ಕುರಿತಾದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐಗೆ ಹಸ್ತಾಂತರಿಸುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.
ಆರ್‌ಜಿಎಫ್‌ಗೆ ಸೋನಿಯಾಗಾಂಧಿ ಅಧ್ಯಕ್ಷರಾಗಿದ್ದರೆ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸದಸ್ಯರಾಗಿದ್ದಾರೆ.
ಆರ್‌ಜಿಸಿಟಿಗೂ ಸೋನಿಯಾಗಾಂಧಿ ಅಧ್ಯಕ್ಷರಾಗಿದ್ದು ರಾಹುಲ್‌ಗಾಂಧಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಡಾ. ಅಶೋಕ್ ಎಸ್.ಗಂಗೂಲಿ ಸದಸ್ಯರಾಗಿದ್ದಾರೆ. 2020ರಲ್ಲಿ ಗೃಹ ಸಚಿವಾಲಯವು ರಚಿಸಿದ ಅಂತರ್ ಸಚಿವಾಲಯ ಸಮಿತಿಯು ನಡೆಸಿದ ತನಿಖೆಯು ಗಾಂಧಿ ಕುಟುಂಬವು ನಡೆಸುತ್ತಿರುವ ಎನ್‌ಜಿಓಗಳಲ್ಲಿ ಉಂಟಾಗಿರುವ ಆಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿದೆ.
ಭಾರತ ಸೇರಿದಂತೆ ವಿದೇಶಗಳಿಂದ ನಿಧಿಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಆದಾಯತೆರಿಗೆ ರಿಟರ್ನ್‌ಗಳನ್ನು ಪಾವತಿಸುವ ಸಂದರ್ಭದಲ್ಲಿ ದಾಖಲೆಗಳ ದುರ್ಬಳಕೆ, ನಿಧಿಗಳ ದುರುಪಯೋಗ ಹಾಗೂ ಕಪ್ಪುಹಣ ಬಿಳುಪು ಬಗ್ಗೆಯೂ ತನಿಖೆ ನಡೆಸುತ್ತಿದೆ.
ಆರ್‌ಜಿಟಿಯನ್ನು 2002ರಲ್ಲಿ ಸ್ಥಾಪಿಸಲಾಗಿದ್ದು, ದೇಶದ ಅವಕಾಶವಂಚಿತ ಜನರ ಅವಶ್ಯಕತೆಗಳಿಗೆ ಸ್ಪಂದಿಸುವ ಉದ್ದೇಶದೊಂದಿಗೆ ಆರ್‌ಜಿಸಿಟಿಯನ್ನು 2002ರಲ್ಲಿ ಸ್ಥಾಪಿಸಲಾಗಿತ್ತು. ಆರ್‌ಜಿಸಿಟಿ ಹಾಗೂ ಆರ್‌ಜಿಎಫ್ ಈ ಎರಡೂ ಸಂಸ್ಥೆಗಳು ಹೊಸದಿಲ್ಲಿಯ ಸಂಸತ್‌ಭವನ ಕಟ್ಟಡದಲ್ಲಿರುವ ಜವಾಹರ ಭವನ್ ಎಂಬ ಒಂದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತವೆ.
ಇಂದಿರಾಗಾಂಧಿ ಸ್ಮಾರಕ ಟ್ರಸ್ಟ್ ನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆದಾಗ್ಯೂ ಮೂರನೇ ಸಂಸ್ಥೆಯ ಬಗ್ಗೆ ಯಾವುದೇ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿಲ್ಲ.2005 ಹಾಗೂ 2009ರ ಮಧ್ಯದ ಅವಧಿಯಲ್ಲಿ ಚೀನಾ ದೇಶವು ಭಾರತದ ಹಿತಾಸಕ್ತಿಗೆ ಪೂರಕವಲ್ಲದಂತಹ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಆರ್‌ಜಿಎಫ್‌ಗೆ ದೇಣಿಗೆ ನೀಡಿತ್ತೆಂದು 2020ರಲ್ಲಿ ಲಡಾಕ್‌ನಲ್ಲಿ ಚೀನಿ ಸೇನೆಯು ದಾಳಿ ನಡೆಸಿರುವುದಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಆಪಾದಿಸಿದ್ದಾರೆ.