×
Ad

ವ್ಯವಸ್ಥೆಯ ವಿರುದ್ಧ ಬಂಡೆದ್ದ ಬಬ್ಬುಸ್ವಾಮಿ ಜನಪರ ಹೋರಾಟಗಾರ: ಜಯನ್ ಮಲ್ಪೆ

Update: 2022-10-23 14:15 IST

ಉಡುಪಿ: ಕರಾವಳಿಯನ್ನು ದೈವಗಳ ನಾಡು ಎನ್ನುತ್ತಾರೆ. ಈ ದೈವಗಳ ರಾಜ ದಲಿತರ ಆರಾಧ್ಯ ದೈವ ಬಬ್ಬುಸ್ವಾಮಿ ಎನ್ನುತ್ತಾರೆ. ಆದರೆ ಈ ಬಬ್ಬುಸ್ವಾಮಿ ವ್ಯವಸ್ಥೆಯ ವಿರುದ್ಧ ಬಂಡೆದ್ದ ಜನಪರ ಹೋರಾಟಗಾರನೂ ಹೌದು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ.

ಬಡನಿಡಿಯೂರು ಬಬ್ಬುಸ್ವಾಮಿ ವಠಾರದಲ್ಲಿ ರವಿವಾರ ಆಯೋಜಿಸಲಾದ ಕದಿಕೆ ಅಂಬೇಡ್ಕರ್ ಯುವಸೇನೆಯ ಗ್ರಾಮ ಶಾಖೆ ಮತ್ತು ದಲಿತ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬಬ್ಬುಸ್ವಾಮಿಯನ್ನು ಯಾವುದೇ ಮನೆಯ ದೈವವಾಗಿ ಪೂಜಿಸುತ್ತಿಲ್ಲ. ದಲಿತರು ಸಂಘಟಿತರಾಗಿ ಗ್ರಾಮಗಳಲ್ಲಿ ಆತನನ್ನು ಪೂಜಿಸುತ್ತಾರೆ. ಬಬ್ಬುವಿನ ಸಾಮರ್ಥ್ಯವನ್ನು ಎದುರಿಸಲಾಗದ ಆಗಿನ ಬಂಡವಾಳಶಾಹಿಗಳು ಮತ್ತು ಪುರೋಹಿತಶಾಹಿಗಳು ಆತನನ್ನು ಸಮಾಧಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಬಬ್ಬುವಿನ ಜೀವನ ಚರಿತ್ರೆಯ ಬಗ್ಗೆ ಅಧ್ಯಯನ ಅಗತ್ಯವಿದೆ. ಯಾರು ಅವನ ಸಾವಿಗೆ ಸಂಚು ರೂಪಿಸಿದರೋ ಅವರನ್ನೇ ಇಟ್ಟುಕೊಂಡು ಆರಾಧಿಸುವುದು ಈ ನಾಡಿನ ದುರಂತ. ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಕಸಿದುಕೊಳ್ಳುವ ಮೂಲಕ ಸಂವಿಧಾನದ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಮುಖ್ಯ ಭಾಷಣಗಾರರಾಗಿ ದಸಂಸ ನಾಯಕ ವಕೀಲ ಮಂಜುನಾಥ ಗಿಳಿಯಾರು ಮಾತನಾಡಿ ಇತಿಹಾಸಗಾರರ ತ್ಯಾಗ ಮತ್ತು ಶ್ರಮವನ್ನು ನೆನಪಿಸಿಕೊಂಡು ದಲಿತ ಸಮಾಸವನ್ನು ಕಟ್ಟಬೇಕಿದೆ. ದೇಶದಲ್ಲಿ ನಡೆಯುವ ಯಾವುದೇ ಚಳವಳಿಯ ತಾಯಿಬೇರು ಅಂಬೇಡ್ಕರ್ ಹಾಗಾಗಿ ಅಂಬೇಡ್ಕರ್ ಕೇವಲ ದಲಿತರ ನಾಯಕನಲ್ಲ ಇಡೀ ಸಮಾಜದ ನಾಯಕ ಅವರ ಹಿಂದೂ ಕೋಡ್‌ಬಿಲ್‌ ಮೂಲಕ ಮಹಿಳೆಯರಿಗೆ ನಾಯ್ಯ ನೀಡಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಲ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಕ್ತಿವೇಲು, ಬಡನಿಡಿಯೂರು ಗ್ರಾಪಂ ಆಧ್ಯಕ್ಷ ಪ್ರಭಾಕರ ತಿಂಗಳಾಯ, ದುರ್ಗಾ ಪರವೇಶ್ವರಿ ದೇವಸ್ಥಾನದ ಅಧ್ಯಕ್ಷ ಉಮೇಶ್ ಪೂಜಾರಿ, ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿದರು.

ವೇದಿಕೆಯಲ್ಲಿ ಗ್ರಾಪಂ ಸದಸ್ಯ ಗಿರೀಶ್ ಸಾಲ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲತಿ, ಸಮಾಜ ಸೇವಕರಾದ ಧನಂಜಯ ಎಸ್.ಮೆಂಡನ್, ರಮೇಶ್ ಪೂಜಾರಿ, ದಲಿತ ಮುಖಂಡರುಗಳಾದ ವಿಶ್ವನಾಥ ಕದಿಕೆ, ಸಂತೋಷ, ಸುಗಂಧಿ, ಸೀನ ಗುರಿಕಾರ, ಕರಿಯ ಗುರಿಕಾರ, ದೇಜು ಗುರಿಕಾರ, ಜಯಕರ ಕದಿಕೆ, ಅನಿಲ್ ಕೋಟ್ಯಾನ್ ಉಪಸ್ಥಿತರಿದ್ದರು.

ಹಿರಿಯ ದಲಿತ ಮುಖಂಡ ದಯಾಕರ್ ಮಲ್ಪೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶುಷ್ಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News