ಕಿತ್ತೂರಿನ ವೀರ ರಾಣಿ ಚೆನ್ನಮ್ಮನ ಕೆಚ್ಚೆದೆಯ ಹೋರಾಟ ಯುವಜನತೆಗೆ ಸ್ಫೂರ್ತಿ: ಉಡುಪಿ ಡಿಸಿ ಕೂರ್ಮಾರಾವ್
ಉಡುಪಿ, ಅ.24: ಕಿತ್ತೂರು ವೀರ ರಾಣಿ ಚೆನ್ನಮ್ಮ ಅವರ ಬಲಿದಾನವು ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಲಕ್ಷಾಂತರ ಹೋರಾಟಗಾರರಿಗೆ ಸ್ಫೂರ್ತಿ ನೀಡಿತ್ತು. ಪ್ರಥಮ ಸ್ವಾತಂತ್ರ್ಯ ಮಹಾ ಸಂಗ್ರಾಮಕ್ಕಿಂತ ಮೊದಲೇ ಬ್ರಿಟಿಷರ ವಿರುದ್ಧ ಏಕಾಂಗಿಯಾಗಿ ಹೋರಾಡಿದ ಕಿತ್ತೂರಿನ ರಾಣಿಯ ಸಾಹಸಗಾಥೆ ಪ್ರತಿಯೊಬ್ಬ ಯುವಕರಿಗೆ ಸ್ಫೂರ್ತಿ ನೀಡುವಂತದ್ದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.
ಅವರು ರವಿವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಕಿತ್ತೂರ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಒಬ್ಬ ಮಹಿಳೆಯಾಗಿ ಸುಸಜ್ಜಿತವಾದ ಬ್ರಿಟಿಷ್ ಸೈನ್ಯದ ಎದುರು ಹೋರಾಡಿರುವುದು ಅದ್ಭುತ. ಈ ವರ್ಷ ರಾಜ್ಯಾದ್ಯಂತ ಕಿತ್ತೂರು ರಾಣಿ ಚೆನ್ನಮ್ಮ ರಥ ಸಂಚರಿಸುವ ಮೂಲಕ ನಾಡಿನ ಜನತೆಗೆ ರಾಣಿಯ ಹೋರಾಟದ ಇತಿಹಾಸವನ್ನು ತಿಳಿಸುವ ಕಾರ್ಯ ನಡೆದಿದೆ. ಉಡುಪಿ ಜಿಲ್ಲೆಯಲ್ಲೂ ವಿಜಯ ಯಾತ್ರೆಯ ರಥ ಬಂದಾಗ ಮೂಲಕ ರಥವನ್ನು ಸ್ವಾಗತಿಸಿಕೊಂಡು, ನಗರದಲ್ಲಿ ಕಲಾತಂಡದೊಂದಿಗೆ ಮೆರವಣಿಗೆಯನ್ನು ಮಾಡಿಕೊಳ್ಳಲಾಯಿತು ಎಂದರು.
ರಾಣಿ ಚೆನ್ನಮ್ಮ ಅವರ ಇತಿಹಾಸವನ್ನು ಅಧ್ಯಯನ ಮಾಡಿ ದೇಶಕ್ಕಾಗಿ ಬದುಕುವ ಸಂಕಲ್ಪವನ್ನು ಮಾಡಬೇಕಾಗಿದೆ ಎಂದು ಯುವ ಜನತೆಗೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯು.ಸಿ.ನಿರಂಜನ್, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಅಧ್ಯಕ್ಷ ಸಿದ್ಧಬಸವಯ್ಯ ಸ್ವಾಮಿ ಚಿಕ್ಕಮಠ, ಬಸವ ಸಮಿತಿಯ ಜಗನ್ನಾಥ ಪಣಸಾಲೆ, ಕರಿಬಸಪ್ಪ ಕೋರಿ ಶೆಟ್ಟರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಮಾಧ್ಯಮ ಪ್ರತಿನಿಧಿ ನರಸಿಂಹ ಮೂರ್ತಿ ಹಾಗೂ ರಾಣಿ ಚೆನ್ನಮ್ಮನ ಅಭಿಮಾನಿಗಳ ಬಳಗದವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಸ್ವಾಗತಿಸಿ, ವಂದಿಸಿದರು.