ಅಮೆರಿಕ ಶಾಲೆಯಲ್ಲಿ ಶೂಟೌಟ್: ಯುವತಿ ಸೇರಿ ಮೂವರು ಮೃತ್ಯು

Update: 2022-10-25 02:04 GMT

ಸೆಂಟ್ ಲೂಯಿಸ್: ಅಮೆರಿಕದ ಸೆಂಟ್ ಲೂಯಿಸ್‍ನ ಹೈಸ್ಕೂಲ್‍ (St. Louis high school) ನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆ ಹಾಗೂ ಯುವತಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಆರು ಮಂದಿ ಗಾಯಗೊಂಡಿದ್ದು, ಗುಂಡಿನ ಚಕಮಕಿಯಲ್ಲಿ ಪೊಲೀಸರು ದಾಳಿಕೋರನನ್ನು ಕೊಂದಿದ್ದಾರೆ.

ಸೆಂಟ್ರಲ್ ವಿಷ್ಯುವಲ್ ಆ್ಯಂಡ್, ಪರ್ಫಾರ್ಮಿಂಗ್ ಆರ್ಟ್ಸ್‌ ಹೈಸ್ಕೂಲ್‍ (Central Visual and Performing Arts High School) ನಲ್ಲಿ ಬೆಳಗ್ಗೆ ಈ ದಾಳಿ ಸಂಭವಿಸಿದ್ದು, ವಿದ್ಯಾರ್ಥಿಗಳು ಭೀತಿಯಿಂದ ತರಗತಿಗಳ ಬಾಗಿಲು ಮುಚ್ಚಿಕೊಂಡು ಮೂಲೆ ಮೂಲೆಗಳಲ್ಲಿ ಅವಿತುಕೊಳ್ಳಬೇಕಾಯಿತು. ಕೆಲವರು ಕಿಟಕಿಗಳಿಂದ ಹಾರಿ ತಪ್ಪಿಸಿಕೊಂಡರು.

ದಾಳಿಕೋರ ನನ್ನತ್ತ ನೋಡಿ ಬಂದೂಕು ಗುರಿ ಇಟ್ಟಿದ್ದ. ಆದರೆ ಬಂದೂಕು ಜಾಮ್ ಆಗಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಭೀತಿಯಿಂದ ವಿದ್ಯಾರ್ಥಿನಿಯೊಬ್ಬಳು ವಿವರಿಸಿದ್ದಾಳೆ.

ದಾಳಿಕೋರ ಸುಮಾರು 20 ವರ್ಷ ವಯಸ್ಸಿನವನಾಗಿದ್ದ ಎಂದು ಪೊಲೀಸ್ ಆಯುಕ್ತ ಮೈಕೆಲ್ ಸ್ಯಾಕ್ ಹೇಳಿದ್ದಾರೆ. ದಾಳಿಕೋರ ಅಥವಾ ಸಂತ್ರಸ್ತರ ಹೆಸರು ಬಹಿರಂಗಪಡಿಸದ ಅವರು, ಮೃತಪಟ್ಟ ಮಹಿಳೆ ಶಿಕ್ಷಕಿಯೇ ಎಂಬ ಕೇಳಿದ ಪ್ರಶ್ನೆಗೂ ಉತ್ತರಿಸಲು ಅವರು ನಿರಾಕರಿಸಿದರು. ಈ ಬಗ್ಗೆ newindianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News