‘ಒಗ್ಗೂಡಿ ಇಲ್ಲವೇ ಸಾಯಿರಿ’ : ಕನ್ಸರ್ವೇಟಿವ್ ನಾಯಕರಿಗೆ ಸುನಕ್ ಕಿವಿಮಾತು

Update: 2022-10-25 12:43 GMT
ರಿಷಿ ಸುನಾಕ್

ಲಂಡನ್,ಅ.25: ಬ್ರಿಟನ್‌ ಪ್ರಧಾನಿ ಭಾರತ ಮೂಲದ ಸಂಸದ ರಿಷಿ ಸುನಕ್(Rishi Sunak) ಅವರು ಕನ್ಸರ್ವೇಟಿವ್‌ಗಳು ‘ಒಗ್ಗೂಡಬೇಕು ಅಥವಾ ಸಾಯಬೇಕು ’(Unite or Die')ಎಂದು ಹೇಳಿದ್ದಾರೆ.

ಸೋಮವಾರ ಕನ್ಸರ್ವೇಟಿವ್ ಪಕ್ಷ(Conservative Party)ದ ನಾಯಕನಾಗಿ ಆಯ್ಕೆಯಾದ ಬಳಿಕ ಪಕ್ಷದ ಇತರ ನಾಯಕರೊಂದಿಗೆ ಸಭೆ ನಡೆಸಿದ ಸುನಕ್,ಮಂಗಳವಾರ ಸಂಪುಟ ಪುನರ್‌ರಚನೆಯೊಂದಿಗೆ ಆರಂಭಿಸಿ ತಾನು ನೀತಿಗಳಿಗೆ ಆದ್ಯತೆ ನೀಡುತ್ತೇನೆ,ವ್ಯಕ್ತಿಗಳಿಗಲ್ಲ ಎಂದು ಸ್ಪಷ್ಟಪಡಿಸಿದರು.

‘ಸಹೋದ್ಯೋಗಿಗಳೇ,ನಾವು ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಬಿಕ್ಕಟ್ಟು ಎರಡನ್ನೂ ಹೊಂದಿದ್ದೇವೆ. ನಾವದನ್ನು ಈಗ ಬಗೆಹರಿಸದಿದ್ದರೆ ಸಾರ್ವಜನಿಕರು ಅದಕ್ಕೆ ನಮ್ಮನ್ನು ಹೊಣೆಯಾಗಿಸುತ್ತಾರೆ. ನಾವು ಅದನ್ನು ಬಗೆಹರಿಸಲು ಸಾಧ್ಯವಿದೆ. ಮುಂದಿನ ಚುನಾವಣೆಗೂ ಮುನ್ನ ನಮಗೆ ಸಮಯವಿದೆ. ನಾವು ಪ್ರತಿಭೆ,ಶಕ್ತಿ ಮತ್ತು ಆಲೋಚನೆಗಳನ್ನು ಹೊಂದಿದ್ದೇವೆ. ಆದರೆ ನಾವು ಒಂದೇ ಹೊಡೆತಕ್ಕೆ ಅದನ್ನು ಸಾಧಿಸಬೇಕಿದೆ,ಎರಡನೇ ಅವಕಾಶ ನಮಗಿಲ್ಲ ’ ಎಂದರು.

ಸುನಕ್ ಬ್ರಿಟನ್‌ನ ನೂತನ ಪ್ರಧಾನಿಯಾಗಿ ಇಂದು ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಅದಕ್ಕೂ ಮುನ್ನ ಅವರ ಪೂರ್ವಾಧಿಕಾರಿ ಲಿಝ್ ಟ್ರಸ್(Liz Truss) ಅವರು ತನ್ನ ಸಂಪುಟದ ಅಂತಿಮ ಸಭೆಯನ್ನು ನಡೆಸಿದ ಬಳಿಕ ದೊರೆ ಚಾರ್ಲ್ಸ್ ಅವರನ್ನು ಭೇಟಿಯಾಗಲು ಬಕಿಂಗ್‌ಹ್ಯಾಮ್ ಅರಮನೆಗೆ ಪ್ರಯಾಣಿಸಲಿದ್ದಾರೆ. ನಂತರ ದೊರೆಯನ್ನು ಭೇಟಿಯಾಗಲಿರುವ ಸುನಕ್ ಇಲ್ಲಿಯ ಪ್ರಧಾನಿಗಳ ಅಧಿಕೃತ ನಿವಾಸ 10,ಡೌನಿಂಗ್ ಸ್ಟ್ರೀಟ್‌ನ ಹೊರಗೆ ಭಾಷಣವನ್ನು ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News