KCR ಪಕ್ಷದಿಂದ ನಾಲ್ವರು ಶಾಸಕರ ಖರೀದಿಗೆ ಯತ್ನ : ಮೂವರ ಬಂಧನ

Update: 2022-10-27 01:58 GMT

ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತಾರೂಢ ಪಕ್ಷದ ನಾಲ್ವರು ಶಾಸಕರನ್ನು ಖರೀದಿಸುವ ಪ್ರಯತ್ನದಲ್ಲಿ ಒಪ್ಪಂದ ಮಾಡಿಕೊಳ್ಳಲು ಮುಂದಾದ ಮೂವರನ್ನು ಫಾರ್ಮ್ ಹೌಸ್ ಒಂದರಿಂದ ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ಹೇಳಿದ್ದಾರೆ.

ಬಂಧಿತರನ್ನು ಹರ್ಯಾಣದ ಫರೀದಾಬಾದ್‍ನ ಅರ್ಚಕ ಸತೀಶ್ ಶರ್ಮಾ ಅಲಿಯಾಸ್ ರಾಮಚಂದ್ರ ಭಾರತಿ, ತಿರುಪತಿಯ ಡಿ.ಸಿಂಹಯಾಜಿ ಮತ್ತು ಉದ್ಯಮಿ ನಂದಕುಮಾರ್ ಎಂದು ಗುರುತಿಸಲಾಗಿದೆ.

ತೆಲಂಗಾಣ ರಾಷ್ಟ್ರೀಯ ಸಮಿತಿಯ ನಾಲ್ವರು ಶಾಸಕರನ್ನು ಗುರಿ ಮಾಡಲಾಗಿದ್ದು, ಇವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾಗಿ ಪೊಲೀಸ್ ಮುಖ್ಯಸ್ಥ ಸ್ಟೀಫನ್ ರವೀಂದ್ರ ಎನ್‍ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

100 ಕೋಟಿ ಅಥವಾ ಹೆಚ್ಚಿನ ಮೊತ್ತವನ್ನು ಒಳಗೊಂಡ ಒಪ್ಪಂದ ಇದಾಗಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಗೆ 100 ಕೋಟಿ ರೂಪಾಯಿ ನೀಡುವ ವಾಗ್ದಾನ ಮಾಡಲಾಗಿತ್ತು ಹಾಗೂ ಪ್ರತಿ ಶಾಸಕರಿಗೆ 50 ಕೋಟಿ ನೀಡುವ ಆಮಿಷ ಒಡ್ಡಿದ್ದರು ಎಂದು ವಿವರ ನೀಡಿದ್ದಾರೆ.

ಬುಧವಾರ ಸಂಜೆ ಅ ನಗರದ ಫಾರ್ಮಾ ಹೌಸ್‍ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಪಕ್ಷವನ್ನು ಬದಲಿಸುವ ಸಲುವಾಗಿ ತಮಗೆ ಲಂಚದ ಆಮಿಷ ಒಡ್ಡಲಾಗಿದೆ ಎಂದು ಶಾಸಕರು ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದರು. ದೊಡ್ಡ ಮೊತ್ತದ ಜತೆಗೆ ಗುತ್ತಿಗೆಗಳು ಹಾಗೂ ಹುದ್ದೆಗಳನ್ನು ನೀಡುವ ಆಮಿಷವನ್ನೂ ಒಡ್ಡಲಾಗಿತ್ತು ಎಂದು ರವೀಂದ್ರ ತಿಳಿಸಿದರು.

ತಂಡೂರು ಶಾಸಕ ರೋಹಿತ್ ರೆಡ್ಡಿಯವರ ಫಾರ್ಮ್‍ಹೌಸ್‍ನಲ್ಲಿ ಈ ವ್ಯವಹಾರ ಕುದುರಿಸಲು ಉದ್ದೇಶಿಸಲಾಗಿತ್ತು. ನಾಲ್ವರು ಶಾಸಕರನ್ನು ಸಿಎಂ ಅವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಕರೆದೊಯ್ಯಲಾಗಿದೆ. "2019ರಿಂದ ಬಿಜೆಪಿ ತೆಲಂಗಾಣದಲ್ಲಿ ಆಪರೇಷನ್ ಕಮಲಾ ಕಾರ್ಯಾಚರಣೆಗೆ ಪ್ರಯತ್ನ ಮಾಡುತ್ತಿದೆ" ಎಂಬ ಆರೋಪಗಳಿವೆ. ಈ ಬಗ್ಗೆ ndtv.com ವರದಿ ಮಾಡಿದೆ.

Similar News