ಕೇರಳ ಹಣಕಾಸು ಸಚಿವರ ರಾಜೀನಾಮೆಗೆ ರಾಜ್ಯಪಾಲರ ಪಟ್ಟು; ಬೇಡಿಕೆ ತಿರಸ್ಕರಿಸಿದ ಸಿಎಂ ಪಿಣರಾಯಿ

Update: 2022-10-27 03:10 GMT

ತಿರುವನಂತಪುರಂ: ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ (finance minister KN Balagopal) ಅವಮಾನಿಸುವ ಉದ್ದೇಶದ ಹೇಳಿಕೆಗಾಗಿ "ಸಂವಿಧಾನಾತ್ಮಕವಾಗಿ ಸೂಕ್ತ ಕ್ರಮ" ಕೈಗೊಳ್ಳುವಂತೆ ರಾಜ್ಯಪಾಲರು (governor Arif Mohammed Khan) ಮುಖ್ಯಮಂತ್ರಿ ಪಿಣರಾಯಿ ವಿಜಯನ್ (CM Pinarayi Vijayan) ಅವರಿಗೆ ಸೂಚಿಸಿದ್ದಾರೆ. ಇದು ದೇಶದ ಸಮಗ್ರತೆಗೆ ಸವಾಲು ಹಾಗೂ ಪ್ರಚೋದನೆಗೆ ಕುಮ್ಮಕ್ಕು ನೀಡುವಂಥದ್ದು ಎಂದು ಖಾನ್ ಹೇಳಿದ್ದಾರೆ. ರಾಜ್ಯಪಾಲರ ಆರೋಪವನ್ನು ತಳ್ಳಿಹಾಕಿರುವ ಸಿಎಂ, ಖಾನ್ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

ಸಿಎಂ ಪಿಣರಾಯಿ ವಿಜಯನ್ ಅವರಿಗೆ ಮಂಗಳವಾರ ಪತ್ರ ಬರೆದಿರುವ ರಾಜ್ಯಪಾಲರು, ಅಕ್ಟೋಬರ್ 18ರಂದು ಬಾಲಗೋಪಾಲ್ ಅವರು ಕರಿಯವಟ್ಟಮ್ ವಿವಿ ಕ್ಯಾಂಪಸ್‍ನಲ್ಲಿ ಮಾಡಿದ್ದಾರೆ ಎನ್ನಲಾದ ಭಾಷಣದಲ್ಲಿ, ಉತ್ತರ ಪ್ರದೇಶದಂಥ ರಾಜ್ಯಗಳಿಂದ ಬಂದ ಜನರು ಕೇರಳದ ವಿಶ್ವವಿದ್ಯಾನಿಲಯಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ಅರ್ಥ ಮಾಡಿಕೊಳ್ಳಲಾರರು ಎಂದು ಟೀಕಿಸಿದ್ದರು. ಜತೆಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಕುಲಪತಿಗಳು 50 ರಿಂದ 100 ಭದ್ರತಾ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದು ಅಲ್ಲಿಗೆ ಭೇಟಿ ನೀಡಿದ ಅವಧಿಯಲ್ಲಿ ಕಂಡುಬಂದಿತ್ತು ಎಂದು ಬಾಲಗೋಪಾಲ್ ಹೇಳಿದ್ದರು.

ಬಾಲಗೋಪಾಲ್ ಅವರ ಹೇಳಿಕೆ ಕೇರಳ ಹಾಗೂ ಇತರ ರಾಜ್ಯಗಳ ನಡುವೆ ದ್ವೇಷಭಾವನೆ ಮೂಡಿಸುವಂಥದ್ದು ಹಾಗೂ ವಿವಿಧ ರಾಜ್ಯಗಳ ಉನ್ನತ ಶಿಕ್ಷಣದ ಬಗ್ಗೆ ತಪ್ಪುಕಲ್ಪನೆ ಮೂಡಿಸುವಂಥದ್ದು ಎಂದು ರಾಜ್ಯಪಾಲರು ಹೇಳಿದ್ದಾರೆ. ದೇಶದ್ರೋಹಿ ಹೇಳಿಕೆ ನೀಡುವ ಮೂಲಕ ಬಾಲಗೋಪಾಲ್ ಅವರು ಪ್ರಮಾಣವಚನನ್ನು ಉಲ್ಲಂಘಿಸಿದ್ದಾರೆ ಎಂದು ಖಾನ್ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News