ಮಧ್ಯಪ್ರದೇಶದಲ್ಲಿ ಆತಂಕ ಸೃಷ್ಟಿಸಿದ ಕ್ಲೋರಿನ್ ಅನಿಲ ಸೋರಿಕೆ

Update: 2022-10-27 02:54 GMT

ಭೋಪಾಲ್: ಮಧ್ಯಪ್ರದೇಶ ರಾಜಧಾನಿಯ ಈದ್ಗಾ ಬೆಟ್ಟ ಪ್ರದೇಶದಲ್ಲಿ ಬುಧವಾರ ಸಂಜೆ ಜಲ ಶುದ್ಧೀಕರಣ ಘಟಕದಿಂದ ಭಾರಿ ಪ್ರಮಾಣದ ಅನಿಲ ಸೋರಿಕೆಯಾಗಿದ್ದು, ಜನದಟ್ಟಣೆಯ ಪ್ರದೇಶದಲ್ಲಿ ಕೆಮ್ಮು, ವಾಂತಿ ಮತ್ತು ಜನರು ಏದುಸಿರು ಬಿಡುವ ದೃಶ್ಯ ಕಂಡುಬಂತು. ಇದು ನಗರದ ಜನತೆಗೆ 1984ರ ಭೋಪಾಲ್ ಅನಿಲ ದುರಂತದ ಕರಾಳ ನೆನಪು ಮರುಕಳಿಸುವಂತೆ ಮಾಡಿತು ಎಂದು timesofindia.com ವರದಿ ಮಾಡಿದೆ.

ಇದು ಕ್ಲೋರಿನ್ ಸೋರಿಕೆ ಎಂದು ಭೋಪಾಲ್ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಯಾರಿಗೂ ಗಂಭೀರ ಸಮಸ್ಯೆಗಳಾಗಿಲ್ಲ ಎಂದು ಹೇಳಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಘಟಕದ ಉದ್ಯೋಗಿಗಳ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ. 900 ಕೆಜಿ ಕ್ಲೋರಿನ್ ಹೊಂದಿದ್ದ 1.5 ಟನ್ ತೂಕದ ಸಿಲಿಂಡರನ್ನು ಕ್ರೇನ್ ಸಹಾಯದಿಂದ ನೀರಿಗೆ ಎಸೆದು ಅಪಾಯ ತಪ್ಪಿಸಲಾಯಿತು.

"ಕ್ಲೋರಿನ್ ಟ್ಯಾಂಕ್‍ನಿಂದ ಅಲ್ಪ ಸೋರಿಕೆ ಸಂಭವಿಸಿದ್ದು ವರದಿಯಾಗಿದೆ. ಅದನ್ನು ನಿಯಂತ್ರಿಸಲು ಪ್ರಯತ್ನಗಳು ಮುಂದುವರಿದಿವೆ. ಕಾಲ್ತುಳಿತದಂಥ ಪರಿಸ್ಥಿತಿ ಇಲ್ಲ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಕೆಲವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಜಿಲ್ಲಾಧಿಕಾರಿ ಅವಿನಾಶ್ ಲಾವಣ್ಯ ಸುದ್ದಿಗಾರರಿಗೆ ತಿಳಿಸಿದರು.

"ಸ್ಥಳೀಯ ನಿವಾಸಿಗಳಿಗೆ ಸ್ವಲ್ಪಮಟ್ಟಿಗೆ ಪರಿಣಾಮ ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಬಿಎಂಸಿ ಆಯುಕ್ತ ಕೆ.ವಿ.ಎಸ್.ಚೌಧರಿ ಹೇಳಿದ್ದಾರೆ. ಬಿಎಂಸಿ ಹಾಗೂ ವಿಕೋಪ ನಿರ್ವಹಣೆ ತಂಡಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ನಿಯೋಜಿಸಲಾಗಿದೆ ಎಂದು timesofindia.com ವರದಿ ಮಾಡಿದೆ.

Similar News