ಹಿಜಾಬ್ ವಿವಾದ ಕೋಮುವಾದೀಕರಣ: ನ್ಯೂಸ್ 18 ಸುದ್ದಿವಾಹಿನಿಗೆ 50,000ರೂ. ದಂಡ

Update: 2022-10-27 14:09 GMT

ಹೊಸದಿಲ್ಲಿ,ಅ.27: ಕರ್ನಾಟಕ ಹಿಜಾಬ್ ನಿಷೇಧ ಪ್ರಕರಣಕ್ಕೆ ಕೋಮು ಬಣ್ಣ ನೀಡಿದ್ದಕ್ಕಾಗಿ ಮತ್ತು ಅಲ್ ಕೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ತಳುಕು ಹಾಕಿದ್ದಕ್ಕಾಗಿ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್ಬಿಡಿಎಸ್ಎ)ವು ನ್ಯೂಸ್ 18 ಇಂಡಿಯಾ ಸುದ್ದಿವಾಹಿನಿಗೆ 50,000 ರೂ.ಗಳ ದಂಡವನ್ನು ವಿಧಿಸಿದೆ.

ಇಂದ್ರಜಿತ ಘೋರ್ಪಡೆ ಎನ್ನುವವರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಪ್ರಾಧಿಕಾರವು ಈ ಆದೇಶವನ್ನು ಹೊರಡಿಸಿದೆ. ವಾಹಿನಿಯು ವಿವಾದಾತ್ಮಕ ಕಾರ್ಯಕ್ರಮವನ್ನು ಎ.6ರಂದು ಪ್ರಸಾರಿಸಿತ್ತು.

 ಸುದ್ದಿವಾಹಿನಿಯ ನಿರೂಪಕ ಅಮನ್ ಚೋಪ್ರಾ ಅವರು ಹಿಜಾಬ್ ನಿಷೇಧದ ವಿರೋಧಿಗಳು ಗಲಭೆ ನಡೆಸಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಮಾಡುವಾಗ ಮುಸ್ಲಿಂ ವಿದ್ಯಾರ್ಥಿನಿಯರನ್ನು

‘ಹಿಜಾಬಿ ಗ್ಯಾಂಗ್ ’ ಮತ್ತು ‘ಹಿಜಾಬ್ವಾಲಿ ಗಝ್ವಾ (ದಾಳಿ) ಗ್ಯಾಂಗ್’ ಎಂದು ಬಣ್ಣಿಸಿದ್ದರು ಎಂದು ಘೋರ್ಪಡೆ ತನ್ನ ದೂರಿನಲ್ಲಿ ಆರೋಪಿಸಿದ್ದರು.

  ‌

ಪ್ರಾಧಿಕಾರವು ಏಳು ದಿನಗಳಲ್ಲಿ ತನ್ನ ವೆಬ್ಸೈಟ್ ಮತ್ತು ತನ್ನ ಎಲ್ಲ ವೇದಿಕೆಗಳಿಂದ ಕಾರ್ಯಕ್ರಮವನ್ನು ತೆಗೆಯುವಂತೆ ಪ್ರಾಧಿಕಾರವು ನ್ಯೂಸ್ 18 ಇಂಡಿಯಾಕ್ಕೆ ಆದೇಶಿಸಿದೆ.

ಕಾರ್ಯಕ್ರಮದಲ್ಲಿ ಹಿಜಾಬ್ ನಿಷೇಧದ ವಿರುದ್ಧ ಮಾತನಾಡಿದ್ದ ಪ್ಯಾನೆಲಿಸ್ಟ್ಗಳನ್ನು ಅಲ್ ಕೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ತಳುಕು ಹಾಕಿದ್ದರಲ್ಲಿ ಯಾವುದೇ ಸಮರ್ಥನೀಯತೆಯು ಪ್ರಾಧಿಕಾರಕ್ಕೆ ಕಂಡು ಬಂದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ಯಾನೆಲಿಸ್ಟ್ಗಳಿಗೆ ಅಲ್ ಕೈದಾ ಜೊತೆ ನಂಟು ಕಲ್ಪಿಸಲು ವಾಹಿನಿಯು ‘ಅಲ್ ಕೈದಾ ಗ್ಯಾಂಗ್ ಬಯಲಾಗಿದೆ’ ಮತ್ತು ‘ಹಿಜಾಬ್ ಕಾ ಫಟಾ ಪೋಸ್ಟರ್,ನಿಕಲಾ ಅಲ್ ಕೈದಾ’ ಹಾಗೂ ‘ಅಲ್ ಕೈದಾ ಹಿಜಾಬ್ ವಿವಾದವನ್ನು ಯೋಜಿಸಿತ್ತು’ ಎಂಬ ಗ್ರಾಫಿಕ್ಗಳನ್ನು ತೋರಿಸಿತ್ತು ಎಂದು ಆದೇಶವು ಬೆಟ್ಟು ಮಾಡಿದೆ. ಕಾರ್ಯಕ್ರಮವು ಪ್ಯಾನೆಲಿಸ್ಟ್ಗಳನ್ನು ‘ಝವಾಹಿರಿ ಗ್ಯಾಂಗ್ ಸದಸ್ಯ’ ಮತ್ತು ‘ಝವಾಹಿರಿಯ ರಾಯಭಾರಿ ’ಎಂದು ಬಣ್ಣಿಸುವ ಮೂಲಕ ಅವರನ್ನು ಅಲ್ ಕೈದಾದ ಮಾಜಿ ಮುಖ್ಯಸ್ಥ ಅಯಮಾನ್ ಝವಾಹಿರಿ ಜೊತೆ ತಳುಕು ಹಾಕಿತ್ತು ಎಂದು ಪ್ರಾಧಿಕಾರವು ಹೇಳಿದೆ.

ಈ ಶಬ್ದಗಳನ್ನು ಹಿಜಾಬ್ ಬೆಂಬಲಿಗರನ್ನು ಪ್ರಚೋದಿಸುತ್ತಿದ್ದವರಿಗಾಗಿ ಬಳಸಲಾಗಿತ್ತೇ ಹೊರತು ಹಿಜಾಬ್ ನಿಷೇಧವನ್ನು ವಿರೋಧಿಸಿದ್ದ ವಿದ್ಯಾರ್ಥಿನಿಯರಿಗಾಗಿ ಅಲ್ಲ ಎಂದು ನ್ಯೂಸ್ 18 ಇಂಡಿಯಾ ಕಳೆದ ಸೆಪ್ಟಂಬರ್ನಲ್ಲಿ ತನ್ನ ಉತ್ತರದಲ್ಲಿ ನೀಡಿರುವ ಸಮಜಾಯಿಷಿಯನ್ನು ಪ್ರಾಧಿಕಾರವು ತಿರಸ್ಕರಿಸಿದೆ.

ಚೋಪ್ರಾ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದ್ದು ಮಾತ್ರವಲ್ಲ, ನಿಲೇಶ ನವ್ಲಾಖಾ ವಿರುದ್ಧ ಭಾರತ ಸರಕಾರ ಪ್ರಕರಣದಲ್ಲಿ ಬಾಂಬೆ ಉಚ್ಚ ನ್ಯಾಯಾಲಯವು ಹೊರಡಿಸಿದ್ದ ನಿರ್ದೇಶನಗಳನ್ನು ಪಾಲಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದು ಪ್ರಾಧಿಕಾರವು ಹೇಳಿದೆ. ಕಾರ್ಯಕ್ರಮವು ಹದ್ದು ಮೀರುವುದನ್ನು ತಡೆಯಲು ನಿರೂಪಕರು ತಮ್ಮ ವಿವೇಚನೆಯನ್ನು ಬಳಸಬೇಕು ಮತ್ತು ಅಗತ್ಯವಾದರೆ ಮಾತುಗಳನ್ನು ಮ್ಯೂಟ್ ಮಾಡುವುದು ಸೇರಿದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯವು ತಿಳಿಸಿತ್ತು.

ಪ್ಯಾನೆಲಿಸ್ಟ್ಗಳು ಲಕ್ಷಣ ರೇಖೆಯನ್ನು ದಾಟುವುದನ್ನು ಚೋಪ್ರಾ ತಡೆದಿರಲಿಲ್ಲ ಮತ್ತು ದೇಶದಲ್ಲಿ ಕೋಮು ಸೌಹಾರ್ದದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಲ್ಲ ಅತಿರೇಕದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿದ್ದರು ಎಂದು ಪ್ರಾಧಿಕಾರವು ಖಂಡಿಸಿದೆ.

ಇಂತಹ ಉಲ್ಲಂಘನೆಗಳು ಮುಂದುವರಿದರೆ ತನ್ನೆದುರು ಹಾಜರಾಗುವಂತೆ ಚೋಪ್ರಾಗೆ ಸೂಚಿಸುವುದಾಗಿ ಅದು ತನ್ನ ಆದೇಶದಲ್ಲಿ ಎಚ್ಚರಿಕೆ ನೀಡಿದೆ. ಉತ್ತರ ದಿಲ್ಲಿ ಮಹಾನಗರ ಪಾಲಿಕೆಯಿಂದ ಎಪ್ರಿಲ್ನಲ್ಲಿ ಜಹಾಂಗಿರ್ಪುರಿಯಲ್ಲಿನ ಮುಸ್ಲಿಮರ ಹಲವಾರು ಅಂಗಡಿಗಳು ಮತ್ತು ಆಸ್ತಿಗಳ ನೆಲಸಮ ಕಾರ್ಯಾಚರಣೆಗಳ ವರದಿಗಾರಿಕೆ ಸಂದರ್ಭದಲ್ಲಿಯೂ ನ್ಯೂಸ್ 18 ಇಂಡಿಯಾ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿತ್ತು ಎಂದು ಪ್ರಾಧಿಕಾರವು ಪ್ರತ್ಯೇಕ ಆದೇಶದಲ್ಲಿ ಹೇಳಿದೆ.

Similar News