ಟ್ವಿಟ್ಟರ್ ಕಚೇರಿಗೆ ಸಿಂಕ್ ಹಿಡಿದುಕೊಂಡು ಪ್ರವೇಶಿಸಿದ ಎಲಾನ್ ಮಸ್ಕ್ !

Update: 2022-10-27 09:44 GMT

ಹೊಸದಿಲ್ಲಿ: ಟ್ವಿಟ್ಟರ್ ಖರೀದಿಯ 44  ಬಿಲಿಯನ್ ಡಾಲರ್ ಒಪ್ಪಂದ ಇನ್ನೇನು ಅಂತಿಮಗೊಳ್ಳಲಿದೆ ಎನ್ನುವಾಗ ಟ್ವಿಟ್ಟರ್‍ನ ನೂತನ ಮುಖ್ಯಸ್ಥರಾಗಲಿರುವ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಇಲಾನ್ ಮಸ್ಕ್, ತಮ್ಮ ಟ್ವಿಟ್ಟರ್ ಬಯೋ ಅನ್ನು 'ಚೀಫ್ ಟ್ವಿಟ್' ಎಂದು ಬದಲಾಯಿಸಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟ್ಟರ್‍ನ ಸ್ಯಾನ್ ಫ್ರಾನ್ಸಿಸ್ಕೋ ಮುಖ್ಯ ಕಚೇರಿಗೂ ಭೇಟಿ ನೀಡಿದ ಮಸ್ಕ್  ಕಚೇರಿಯನ್ನು ಪ್ರವೇಶಿಸುವಾಗ ತಮ್ಮ  ಕೈಯ್ಯಲ್ಲೊಂದು ಸಿಂಕ್ ಹಿಡಿದುಕೊಂಡಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ "ಟ್ವಿಟ್ಟರ್ ಮುಖ್ಯ ಕಾರ್ಯಾಲಯವನ್ನು ಪ್ರವೇಶಿಸುತ್ತಿದ್ದೇನೆ - ಲೆಟ್ ದೆಟ್ ಸಿಂಕ್ ಇನ್!'' ಎಂದು ಈ ವೀಡಿಯೋಗೆ ಮಾರ್ಮಿಕ ಕ್ಯಾಪ್ಶನ್ ನೀಡಿದ್ದಾರೆ.

ಟ್ವಿಟ್ಟರ್ ಖರೀದಿ ಒಪ್ಪಂದ ಅಂತಿಮಗೊಳ್ಳುವ ಮುನ್ನ ಮಸ್ಕ್ ಅವರು ಕಚೇರಿಗೆ ಭೇಟಿ ನಿಡಲಿರುವರೆಂದು ಟ್ವಿಟ್ಟರ್ ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಲೆಸ್ಲೀ ಬಲ್ರ್ಯಾಂಡ್ ಮುಂಚಿತವಾಗಿಯೇ ಸಿಬ್ಬಂದಿಗೆ ತಿಳಿಸಿದ್ದರೆನ್ನಲಾಗಿದೆ.

ಮಸ್ಕ್ ಅವರು ಟ್ವಿಟ್ಟರ್ ಖರೀದಿ ಪ್ರಸ್ತಾಪ ಎಪ್ರಿಲ್ ನಲ್ಲಿಯೇ ಮುಂದಿಟ್ಟಿದ್ದರೂ ಸಂಸ್ಥೆಯು ಸ್ಪ್ಯಾಮ್ ಮತ್ತು ಬಾಟ್ ಖಾತೆಗಳ ಬಗ್ಗೆ ನಿಖರ  ಮಾಹಿತಿ ನೀಡುತ್ತಿಲ್ಲ ಎಂದು ಖರೀದಿಯಿಂದ ಮೊದಲು ಮಸ್ಕ್ ಹಿಂದೆ ಸರಿದಿದ್ದರು.

ಖರೀದಿಯಿಂದ ಹಿಂದೆ ಸರಿಯಲು ಮಸ್ಕ್ ಅವರು ಬಾಟ್ ನೆಪ ಒಡ್ಡಿದ್ದಾರೆಂದು ಆಗ ಟ್ವಿಟ್ಟರ್ ಹೇಳಿತ್ತು.

ಆದರೆ ಕಳೆದ ವಾರ ಯು-ಟರ್ನ್ ಹೊಡೆದ ಮಸ್ಕ್ ಮೂಲತಃ ಒಪ್ಪಿಕೊಂಡ ಬೆಲೆಗೆ ಖರೀದಿಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 28 ರ ತನಕ ನ್ಯಾಯಾಧೀಶರು ತಡೆಹಿಡಿದಿದ್ದಾರೆ. ನಾಳೆಯೊಳಗೆ ಒಪ್ಪಂದಕ್ಕೆ ಸಹಿ ಬೀಳದೇ ಇದ್ದರೆ ಪ್ರಕರಣದ ವಿಚಾರಣೆ ಮತ್ತೆ ಆರಂಭಗೊಳ್ಳುವ ನಿರೀಕ್ಷೆಯಿದೆ.

Similar News