ಪುಟಿನ್ ಮಾರ್ಗದರ್ಶಕನ ಪುತ್ರಿ ರಶ್ಯದಿಂದ ಪರಾರಿ

Update: 2022-10-27 15:53 GMT

ಮಾಸ್ಕೊ, ಅ.27: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್(Vladimir Putin) ಅವರ ರಾಜಕೀಯ ಮಾರ್ಗದರ್ಶಕನ ಪುತ್ರಿ, ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದ ಖ್ಯಾತ ಪತ್ರಕರ್ತೆ ಕೆಸಿನಿಯಾ ಸೊಬ್ಚಕ್(Ksenia Sobchak) ದೇಶ ಬಿಟ್ಟು ಪರಾರಿಯಾಗಿರುವುದಾಗಿ ವರದಿಯಾಗಿದೆ.

‌ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ವಿರೋಧಿಸಿ ಸಾರ್ವಜನಿಕವಾಗಿ ಪ್ರಶ್ನಿಸಿ ಆಡಳಿತದ ಕೆಂಗಣ್ಣಿಗೆ  ಗುರಿಯಾಗಿದ್ದ ಕೆಸಿನಿಯಾ ವಿರುದ್ಧ ಸುಲಿಗೆಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ಈಕೆಯ ನಿಕಟ ಸಹವರ್ತಿಯನ್ನು ಪೊಲೀಸರು ಬಂಧಿಸಿದ್ದರು ಮತ್ತು ಈಕೆಯ ಮನೆಯ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದರು.

ಈಕೆಯ ತಂದೆ, ಪ್ರಜಾಸತ್ತಾತ್ಮಕ ಸುಧಾರಕ ಹಾಗೂ ಸೈಂಟ್ ಪೀಟರ್ಸ್ಬರ್ಗ್ನ ಮಾಜಿ ಮೇಯರ್ ಆಗಿದ್ದ  ಅನಾಟೊಲಿ ಸೊಬ್ಚಕ್ (Anatoly Sobchak)ತನ್ನ ರಾಜಕೀಯ ಬದುಕಿನ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಪುಟಿನ್ ಹಲವು ಬಾರಿ ಹೇಳಿದ್ದಾರೆ.

2012ರಲ್ಲಿ ರಶ್ಯದ ಅಧ್ಯಕ್ಷರ ವಿರುದ್ಧ ಆರಂಭವಾದ ಪ್ರತಿಭಟನೆಯಲ್ಲಿ ಸಕ್ರಿಯವಾಗಿದ್ದ ಕೆಸಿನಿಯಾ, 2018ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ವಿರುದ್ಧ ಸ್ಪರ್ಧಿಸಿ ಗಮನ ಸೆಳೆದಿದ್ದರು. ಆದರೆ ಕೇವಲ 2% ಮತ ಪಡೆಯಲಷ್ಟೇ ಶಕ್ತರಾಗಿದ್ದರು. ಆನ್ಲೈನ್ ಮಾಧ್ಯಮ ಸಂಸ್ಥೆ ಆರಂಭಿಸಿದ್ದ ಕೆಸಿನಿಯಾ, ರಶ್ಯದ ಜೈಲಿನಲ್ಲಿ ಕೈದಿಗಳ ವಿರುದ್ಧ ನಡೆಸುವ ದೌರ್ಜನ್ಯ ಮುಂತಾದ ವಿಷಯಗಳ ಬಗ್ಗೆ  ವರದಿ ಪ್ರಕಟಿಸಿ ಆಡಳಿತದ ವಕ್ರದೃಷ್ಟಿಗೆ ಗುರಿಯಾಗಿದ್ದರು. ಮಂಗಳವಾರ ಇವರ ಮಾಧ್ಯಮ ಸಂಸ್ಥೆಯ ವಾಣಿಜ್ಯ ನಿರ್ದೇಶಕ ಕಿರಿಲ್ ಸುಖನೋವ್ರನ್ನು ಪೊಲೀಸರು ಬಂಧಿಸಿದ್ದರು ಹಾಗೂ ಕೆಸಿನಿಯಾ ಬಂಧನಕ್ಕೆ ವಾರಂಟ್ ಹೊರಡಿಸಿದ್ದರು.

ರಶ್ಯದಿಂದ ಪರಾರಿಯಾಗಿರುವ ಕೆಸಿನಿಯಾ ಈಗ ಲಿಥುವೇನಿಯಾದಲ್ಲಿ ಇರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Similar News