ಹಕ್ಕಿ ಈಗ ಸ್ವತಂತ್ರ: ಟ್ವಿಟರ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲಾನ್ ಮಸ್ಕ್‌ ಟ್ವೀಟ್

Update: 2022-10-28 08:40 GMT

ಹೊಸದಿಲ್ಲಿ: ಟ್ವಿಟರ್‌ ಇನ್‍ಕಾರ್ಪೊರೇಷನ್ ಸಂಸ್ಥೆ (Twitter Inc) ಯನ್ನು ಖರೀದಿಸುವ 44 ಶತಕೋಟಿ ಡಾಲರ್ ($44 billion) ಒಪ್ಪಂದವನ್ನು ಶ್ರೀಮಂತ ಉದ್ಯಮಿ, ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಗುರುವಾರ ಪೂರ್ಣಗೊಳಿಸಿದ್ದಾರೆ. ಖರೀದಿ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆಯೇ ಸಿಇಒ ಪರಾಗ್ ಅಗರ್ವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್, ಕಾನೂನು ವ್ಯವಹಾರಗಳು ಮತ್ತು ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ ಅವರನ್ನು ವಜಾಗೊಳಿಸಲಾಗಿದೆ.

ಟ್ವಿಟರ್‌ ಖರೀದಿ ನಂತರ ಟ್ವೀಟ್ ಮಾಡಿರುವ ಮಸ್ಕ್, "ಹಕ್ಕಿ ಈಗ ಸ್ವತಂತ್ರವಾಗಿದೆ" ಎಂದಿದ್ದಾರೆ. ಟ್ವಟರ್ ನೀಲಿ ಹಕ್ಕಿಯ ಲೋಗೋ ಹೊಂದಿದೆ.

ಇದಕ್ಕೂ ಮೊದಲು ತಮ್ಮ ಟ್ವಿಟರ್ ಬಯೋ ಅನ್ನು 'ಚೀಫ್ ಟ್ವಿಟ್' ಎಂದು ಬದಲಾಯಿಸಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟರ್ ನ ಸ್ಯಾನ್ ಫ್ರಾನ್ಸಿಸ್ಕೋ ಮುಖ್ಯ ಕಚೇರಿಗೂ ಭೇಟಿ ನೀಡಿದ್ದ ಮಸ್ಕ್ ಕಚೇರಿಯನ್ನು ಪ್ರವೇಶಿಸುವಾಗ ತಮ್ಮ  ಕೈಯ್ಯಲ್ಲೊಂದು ಸಿಂಕ್ ಹಿಡಿದುಕೊಂಡಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. "ಟ್ವಿಟರ್ ಮುಖ್ಯ ಕಾರ್ಯಾಲಯವನ್ನು ಪ್ರವೇಶಿಸುತ್ತಿದ್ದೇನೆ - ಲೆಟ್ ದೆಟ್ ಸಿಂಕ್ ಇನ್!'' ಎಂದು ಈ ವೀಡಿಯೋಗೆ ಮಾರ್ಮಿಕ ಕ್ಯಾಪ್ಶನ್ ಕೂಡ ನೀಡಿದ್ದರು.

ಇದನ್ನೂ ಓದಿ: ಟ್ವಿಟರ್ ಕಚೇರಿಗೆ ಸಿಂಕ್ ಹಿಡಿದುಕೊಂಡು ಪ್ರವೇಶಿಸಿದ ಎಲಾನ್ ಮಸ್ಕ್ !

Similar News