ನಿಟ್ಟೂರು ಮಹಿಳಾ ನಿಲಯದ ಯುವತಿಗೆ ಒಲಿದ ಕಂಕಣಭಾಗ್ಯ: ದಾವಣಗೆರೆ ಯುವಕನೊಂದಿಗೆ ಮದುವೆ
►ಸ್ಟೇಟ್‌ಹೋಂನಲ್ಲಿ ಸಂಭ್ರಮ
ಉಡುಪಿ, ಅ.28: ನಗರದ ನಿಟ್ಟೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವ ಸ್ತ್ರೀ ಸೇವಾ ನಿಕೇತನ (ಸ್ಟೇಟ್‌ಹೋಮ್)ನಲ್ಲಿ ಇಂದು ಮದುವೆ ಸಂಭ್ರಮ. ಸರಿಯಾಗಿ ಹತ್ತು ವರ್ಷಗಳ ಬಳಿಕ ಇಲ್ಲಿನ ನಿವಾಸಿನಿಯೊಬ್ಬರಿಗೆ ಕಂಕಣಭಾಗ್ಯ ಒಲಿದು ಬಂದಿದ್ದು, ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಈಕೆಯ ವಿವಾಹ ಸಮಾರಂಭವನ್ನು ಸಾಂಪ್ರದಾಯಿಕ ರೀತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಾಲ್ಕು ವರ್ಷಗಳಿಂದ ರಾಜ್ಯ ಮಹಿಳಾ ನಿಲಯದ ನಿವಾಸಿನಿಯಾಗಿರುವ ಉಡುಪಿ ತಾಲೂಕಿನವರೇ ಆದ 25 ವರ್ಷ ಪ್ರಾಯದ ಜಯಶ್ರೀ ಇಂದಿನ ವಧುವಾಗಿದ್ದು, ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ 29ರ ಹರೆಯದ ಕೃಷಿಕ ಮಲ್ಲೇಶ್ ಡಿ.ಎಲ್. ಆಕೆಯ ಕೈಹಿಡಿದ ವರ. ಇವರಿಬ್ಬರ ವಿವಾಹ ಇಂದು ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು.
1992ರ ಬಳಿಕ ನಿಟ್ಟೂರು ಮಹಿಳಾ ನಿಲಯದ ನಿವಾಸಿನಿಯರಿಗೆ ನಡೆಯುತ್ತಿರುವ 23ನೇ ವಿವಾಹ ಕಾರ್ಯಕ್ರಮ ಇದಾಗಿದ್ದು, 2012ರ ಬಳಿಕ ಮೊದಲನೇಯದು ಎಂದು ವೀಣಾ ವಿವೇಕಾನಂದ ತಿಳಿಸಿದರು.
ಉಡುಪಿ ತಾಲೂಕಿನವರೇ ಆದ ಜಯಶ್ರೀ, ಕೌಟುಂಬಿಕ ಕಾರಣಗಳಿಗಾಗಿ, ಮನೆಯವರಿಂದ ಪರಿತ್ಯಕ್ತಳಾಗಿ ಸ್ಟೇಟ್ ಹೋಮ್‌ನಲ್ಲಿ ನಾಲ್ಕು ವರ್ಷಗಳಿಂದ ಆಶ್ರಯ ಪಡೆದಿದ್ದಾರೆ. ಕೇವಲ ನಾಲ್ಕನೇ ಕ್ಲಾಸಿನವರೆಗೆ ಕಲಿತಿರುವ ಆಕೆ ಇಲ್ಲಿ ಬಂದ ನಂತರ ಹೊಲಿಗೆ, ಅಡುಗೆ ಮಾಡುವುದು ಸೇರಿದಂತೆ ವಿವಿಧ ಕೌಶಲ್ಯ ತರಬೇತಿಯನ್ನು ಪಡೆದು ಕೊಂಡಿದ್ದಾರೆ. ಒಳ್ಳೆಯ ಗುಣದ ಸೌಮ್ಯ ನಡೆ-ನುಡಿಯ ಯುವತಿ ಈಕೆಯಾಗಿದ್ದಾರೆ ಎಂದು ವೀಣಾ ತಿಳಿಸಿದರು.
ಮಹಿಳಾ ನಿಲಯದಲ್ಲಿದ್ದ ಈಕೆಯ ವಿವಾಹ ಪ್ರಸ್ತಾಪ ದಾವಣಗೆರೆಯ ವರನ ಕುಟುಂಬದಿಂದಲೇ ಬಂದಿದ್ದು, ಆತನ ಗುಣ-ನಡತೆ, ಆರ್ಥಿಕ ಸ್ಥಿತಿ-ಗತಿಯ ಬಗ್ಗೆ ದಾವಣಗೆರೆ ಜಿಲ್ಲೆಯ ಅಧಿಕಾರಿಗಳ ಮೂಲಕ ಮಾಹಿತಿ ಸಂಗ್ರಹಿಸಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ವ್ಯವಸ್ಥಾಪನ ಸಮಿತಿಯ ಮುಂದೆ ವರದಿ ಇರಿಸಿ ಒಪ್ಪಿಗೆ ಪಡೆದು, ರಾಜ್ಯ ಮಹಿಳಾ ಇಲಾಖೆಯ ನಿರ್ದೇಶಕರ ಅನುಮೋದನೆಯೊಂದಿಗೆ ವಿವಾಹ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕೃಷಿಕ ಲೋಕಪ್ಪ ಕೊಡ್ತಾಳ್ (ಲೋಕಪ್ಪ ಡಿ.ಎಚ್.) ಅವರ ಎರಡನೇ ಪುತ್ರನಾದ ವರ ಮಲ್ಲೇಶ್, ಕುಟುಂಬಕ್ಕಿರುವ ಎಂಟು ಎಕರೆ ಕೃಷಿ ಭೂಮಿಯನ್ನು ತಂದೆಯೊಂದಿಗೆ ಸೇರಿ ನಿಭಾಯಿಸುತಿದ್ದಾರೆ. ಇವರಿಗೆ ಒಬ್ಬ ಅಣ್ಣ ಹಾಗೂ ತಂಗಿ ಇದ್ದು ಇಬ್ಬರಿಗೂ ಮದುವೆಯಾಗಿದೆ. ಡಿಪ್ಲೋಮಾ ಇಂಜಿನಿಯರ್ ಆದ ಅಣ್ಣ ಬೆಂಗಳೂರು ವಾಸಿ. ಇಡೀ ಕುಟುಂಬ ಮಲ್ಲೇಶ್ ಅವರ ಮದುವೆಯಲ್ಲಿ ಉತ್ಸಾಹದಿಂದ ಭಾಗವಹಿಸಿತ್ತು.
ಮಲ್ಲೇಶ್-ಜಯಶ್ರೀ ಅವರ ವಿವಾಹ ನಿನ್ನೆಯಷ್ಟೇ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾವಣಿಗೊಂಡಿದೆ. ವಿವಾಹದ ವೇಳೆ ಆಕೆಗೆ ಸರಕಾರ ಹಾಗೂ ಇಲಾಖೆಯ ವತಿಯಿಂದ ಸಿಗುವ 15 ಸಾವಿರ ರೂ. ನಿಧಿಯನ್ನು ಆಕೆಯ ಹೆಸರಿನಲ್ಲಿ ಡಿಪಾಸಿಟ್ ಮಾಡಲಾಗಿದೆ. ಅಲ್ಲದೇ ವಿವಿಧ ದಾನಿಗಳು ಸಹ ಆಕೆಗೆ 50000 ರೂ. ನೀಡಿದ್ದಾರೆ. ಅಲ್ಲದೇ ಮದುವೆಯ ಖರ್ಚಿಗೆಂದು ಐದು ಸಾವಿರ ರೂ. ನೀಡಲಾಗುತ್ತಿದೆ. ಆಕೆಗೆ ಕರಿಮಣಿ ಹಾಗೂ ಧಾರೆ ಸೀರೆಯನ್ನು ಉದ್ಯಮ ಸಂಸ್ಥೆಯೊಂದು ನೀಡಿದೆ. ಅಂಬಲಪಾಡಿ ದೇವಸ್ಥಾನ ಊಟದ ವ್ಯವಸ್ಥೆಯನ್ನು ನೋಡಿಕೊಂಡಿದೆ ಎಂದು ವೀಣಾ ವಿವೇಕಾನಂದ್ ವಿವರಿಸಿದರು.
ವೀಣಾ ವಿವೇಕಾನಂದ್ ಸೇರಿ ಇಲಾಖೆಯ ಐವರು ಹೆತ್ತವರ ಸ್ಥಾನದಲ್ಲಿ ನಿಂತು ಜಯಶ್ರೀ ಅವರನ್ನು ಧಾರೆ ಎರೆದು ಶಾಸ್ತ್ರೋಕ್ತವಾಗಿ ವಿವಾಹ ನಡೆಸಿ ಕೊಟ್ಟರು. ವರ ಮಲ್ಲೇಶ್‌ರ ತಂದೆ-ತಾಯಿ, ವರನ ಸೋದರ ಮಾವ ವಿವಾಹದ ಎಲ್ಲಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡರು.
ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ವೀಣಾ ವಿವೇಕಾನಂದ, ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಕುಂದರ್ ವಧು-ವರರನ್ನು ಆಶೀರ್ವದಿಸಿದರು. ವಿವಾಹದ ಪೌರೋಹಿತ್ಯ ನಿರ್ವಹಿಸಿದ ಮೂಡುಬೆಳ್ಳೆ ಗಣೇಶ್ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಮಹಿಳಾ ನಿಲಯ ಅಧೀಕ್ಷಕಿ ಲೀಲಾವತಿ ಉಪಸ್ಥಿತರಿದ್ದರು.
"ರಾಜ್ಯ ಮಹಿಳಾ ನಿಲಯದಲ್ಲಿ ಇಂದು ನಡೆದಿರುವುದು ಅಪರೂಪದ, ಆದರ್ಶದ, ವಿರಳ ಮದುವೆ. ಅನಾಥ ಹುಡುಗಿಗೆ ಬಾಳಿಗೆ ಬೆಳಕು ನೀಡುವ ಮಾದರಿ ಕೆಲಸವಿದು. ಸಮಾಜದಲ್ಲಿ ಇದು ಒಳ್ಳೆಯ ಬೆಳವಣಿಗೆ. ಉಳಿದವರಿಗೆ ಇದು ಪ್ರೇರಣೆ ನೀಡಬೇಕು. ಸಮಾಜದಲ್ಲಿ ಇಂಥ ಮದುವೆ ಹೆಚ್ಚೆಚ್ಚು ನಡೆಯಬೇಕು. ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಪ್ರಶಂಸಾರ್ಹರು. ಮುಂದೆಯೂ ಇದೇ ರೀತಿಯ ವಿವಾಹ ನಡೆಸಲು ಸಿದ್ದರಿದ್ದೇವೆ".
- ಕೂರ್ಮಾರಾವ್ ಎಂ., ಜಿಲ್ಲಾಧಿಕಾರಿ ಉಡುಪಿ
"ವರನ ಕುಟುಂಬದಿಂದ ಮದುವೆ ಪ್ರಸ್ತಾಪ ಬಂದ ಬಳಿಕ ನಾವು ಎಚ್ಚರಿಕೆಯಿಂದ ಮುಂದುವರಿದಿದ್ದೇವೆ. ವರ ಹಾಗೂ ಕುಟುಂಬದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ವಿವಾಹಕ್ಕೆ ಅನುಮತಿ ನೀಡಿದ್ದೇವೆ. ವಧು-ವರರ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿದ್ದೇವೆ. ಗುರುವಾರ ವಿವಾಹ ನೋಂದಣಿಗೊಂಡಿದೆ. ವಧುವಿನ ಹೆಸರಿನಲ್ಲಿ ಈಗಾಗಲೇ 15000 ರೂ. ಠೇವಣಿ ಇರಿಸಿದ್ದೇವೆ. ದಾನಿಗಳಿಂದ ಬಂದ 50 ಸಾವಿರ ರೂ.ಗಳನ್ನೂ ಸೇರಿಸಿದ್ದೇವೆ. ದಂಪತಿಗಳು ಮುಂದಿನ ಮೂರು ವರ್ಷ ನಮ್ಮ ಪರಿವೀಕ್ಷಣೆಯಲ್ಲಿ ಇರುತ್ತಾರೆ.
-ವೀಣಾ ವಿವೇಕಾನಂದ, ಉಪನಿರ್ದೇಶಕಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ.
"ನಾವಾಗಿಯೇ ಇಲ್ಲಿಗೆ ಬಂದು ವಿವಾಹದ ಪ್ರಸ್ತಾಪ ಮಾಡಿದ್ದೇವೆ. ಪ್ರಸ್ತಾಪಕ್ಕೆ ಯುವತಿಯೂ ಒಪ್ಪಿಗೆ ಸೂಚಿಸಿದ್ದಳು. ದಾವಣಗೆರೆ ಜಿಲ್ಲಾಧಿಕಾರಿ, ನ್ಯಾಮತಿಯ ತಹಶೀಲ್ದಾರ್ ಮೂಲಕ ನಮ್ಮ ಕುಟುಂಬದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ ಬಳಿಕವೇ ಇಲ್ಲಿನ ಅಧಿಕಾರಿಗಳು ವಿವಾಹಕ್ಕೆ ಸಮ್ಮತಿಸಿದ್ದಾರೆ. ನಮ್ಮ ಮನೆಯಲ್ಲಿ ಎಲ್ಲರಿಗೂ ವಿವಾಹ ಒಪ್ಪಿಗೆ ಇದೆ. ಈತ ಎರಡನೇ ಮಗ. ಹಿರಿಯ ಮಗ ಬೆಂಗಳೂರಿನಲ್ಲಿದ್ದಾನೆ. ಮಗಳು ವಿವಾಹಿತಳು. ಈತ ಮನೆಯಲ್ಲಿದ್ದು ಎಂಟು ಎಕರೆ ಜಾಗದಲ್ಲಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ನನಗೆ ನೆರವಾಗುತಿದ್ದಾನೆ. ಇದೇ ರವಿವಾರ ಮನೆಯಲ್ಲಿ ರಿಸೆಪ್ಶನ್ ಇರಿಸಿಕೊಂಡಿದ್ದೇವೆ.
-ಲೋಕಪ್ಪ ಡಿ.ಎಚ್., ವರನ ತಂದೆ, ನ್ಯಾಮತಿ ದಾವಣಗೆರೆ.