ಮಹಿಳೆಯ ಸಂತಾನೋತ್ಪತ್ತಿ ಹಕ್ಕುಗಳ ಮೇಲಿನ ವಯೋಮಿತಿಯ ವಿರುದ್ಧ ಅರ್ಜಿ ಕುರಿತು ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್

Update: 2022-10-29 13:07 GMT

ಹೊಸದಿಲ್ಲಿ,ಅ.29: ಗರ್ಭಧಾರಣೆ(pregnancy) ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಪರೀಕ್ಷೆಗಳನ್ನು ನಡೆಸಲು ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಮೇಲೆ 35 ವರ್ಷಗಳ ವಯೋಮಿತಿಯ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನೋಟಿಸ್ ಹೊರಡಿಸಿದೆ.

ಅರ್ಜಿಯನ್ನು ಸಲ್ಲಿಸಿರುವ ನ್ಯಾಯವಾದಿ ಮೀರಾ ಕೌರಾ ಪಟೇಲ (Meera Kaura Patel)ಅವರು,ವಯೋಮಿತಿಯು ಮಹಿಳೆಯ ಸಂತಾನೋತ್ಪತ್ತಿ ಹಕ್ಕುಗಳ ಮೇಲಿನ ನಿರ್ಬಂಧವಾಗಿದೆ ಎಂದು ವಾದಿಸಿದ್ದಾರೆ.

35 ವರ್ಷಗಳ ವಯೋಮಿತಿಯು ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಮೇಲೆ ನಿರ್ಬಂಧವಾಗಿದೆ ಎಂದು ವಾದಿಸಲು ಅರ್ಜಿದಾರರು ಗರ್ಭಧಾರಣೆ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆಯ ಕಲಂ 4(3)(i  ) ಮತ್ತು ಈ ನ್ಯಾಯಾಲಯದ ಇತ್ತೀಚಿನ ತೀರ್ಪನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎ.ಎಸ್.ಓಕಾ ಅವರ ಪೀಠವು ಕೇಂದ್ರ ಮತ್ತು ಇತರರಿಗೆ ನೋಟಿಸ್ಗಳನ್ನು ಹೊರಡಿಸಿತು.

 ಕಾಯ್ದೆಯಂತೆ ಗರ್ಭಿಣಿಯ ವಯಸ್ಸು 35 ವರ್ಷಗಳನ್ನು ದಾಟಿರದಿದ್ದರೆ ಪ್ರಸವ ಪೂರ್ವ ಲಿಂಗ ಪತ್ತೆ ಪರೀಕ್ಷೆಗಳನ್ನು ನಡೆಸುವಂತಿಲ್ಲ.

 ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಮಹಿಳೆಯ ಸಂತಾನೋತ್ಪತ್ತಿ ಹಕ್ಕುಗಳ ಕುರಿತು ಮಹತ್ವದ ತೀರ್ಪೊಂದರಲ್ಲಿ ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ ಎಲ್ಲ ಮಹಿಳೆಯರು ಗರ್ಭಾವಸ್ಥೆಯ 24 ವಾರಗಳವರೆಗೆ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರಾಗಿದ್ದಾರೆ ಎಂದು ಎತ್ತಿ ಹಿಡಿದಿತ್ತು. ಮಹಿಳೆಯರ ವೈವಾಹಿಕ ಸ್ಥಿತಿಯ ಆಧಾರದಲ್ಲಿ ಯಾವುದೇ ಭೇದವು ಸಾಂವಿಧಾನಿಕವಾಗಿ ಸಮರ್ಥನೀಯವಲ್ಲ ಎಂದೂ ಅದು ಸ್ಪಷ್ಟಪಡಿಸಿತ್ತು.

Similar News