ಭಯೋತ್ಪಾದನೆ ನಿಗ್ರಹಕ್ಕಾಗಿ ವಿಶ್ವಸಂಸ್ಥೆ ಟ್ರಸ್ಟ್ ನಿಧಿಗೆ ಐದು ಲಕ್ಷ ಡಾಲರ್ ದೇಣಿಗೆ ನೀಡಲಿರುವ ಭಾರತ‌

Update: 2022-10-29 13:10 GMT

ಹೊಸದಿಲ್ಲಿ,ಅ.29: ಭಯೋತ್ಪಾದನೆಯನ್ನು ಎದುರಿಸಲು ಸದಸ್ಯ ರಾಷ್ಟ್ರಗಳ ಸಾಮರ್ಥ್ಯ ವರ್ಧನೆ ಬೆಂಬಲಕ್ಕೆ ನೆರವಾಗಲು ಭಾರತವು ಈ ವರ್ಷ ಭಯೋತ್ಪಾದನೆ ನಿಗ್ರಹಕ್ಕಾಗಿ ವಿಶ್ವಸಂಸ್ಥೆ(WHO)ಯ ಟ್ರಸ್ಟ್ ನಿಧಿಗೆ ಐದು ಲ.ಡಾ.( ಸುಮಾರು 4.114 ಕೋ.ರೂ.)ಗಳ ದೇಣಿಗೆಯನ್ನು ನೀಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ  ಎಸ್.ಜೈಶಂಕರ್(S. Jaishankar)  ಅವರು ಶನಿವಾರ ಇಲ್ಲಿ ತಿಳಿಸಿದರು.

ಭಯೋತ್ಪಾದನೆ ಉದ್ದೇಶಗಳಿಗಾಗಿ ನೂತನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಎದುರಿಸುವ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯ ವಿಶೇಷ ಸಭೆಯ ಪೂರ್ಣಾಧಿವೇಶನದಲ್ಲಿ ಮುಖ್ಯ ಭಾಷಣವನ್ನು ಮಾಡಿದ ಅವರು ಐದು ಲ.ಡಾ.ಗಳ ದೇಣಿಗೆಯನ್ನು ಪ್ರಕಟಿಸಿದರು.

 ಮಾನವತೆಗೆ ಅತ್ಯಂತ ಗಂಭೀರ ಬೆದರಿಕೆಯನ್ನು ಎದುರಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಭಯೋತ್ಪಾದನೆಯ ಜಾಗತಿಕ ಬೆದರಿಕೆಯು, ವಿಶೇಷವಾಗಿ ಏಶ್ಯಾ ಮತ್ತು ಆಫ್ರಿಕಾದಲ್ಲಿ ಹೆಚ್ಚುತ್ತಿದೆ ಮತ್ತು ವಿಸ್ತರಿಸುತ್ತಿದೆ ಎಂದು ಜೈಶಂಕರ ತನ್ನ ಭಾಷಣದಲ್ಲಿ ಒತ್ತಿ ಹೇಳಿದರು.

ಭಯೋತ್ಪಾದನೆಯು ಮಾನವತೆಗೆ ಅತ್ಯಂತ ಗಂಭೀರ ಬೆದರಿಕೆಯಾಗಿಯೇ ಉಳಿದುಕೊಂಡಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಕಳೆದೆರಡು ದಶಕಗಳಲ್ಲಿ ಈ ಪಿಡುಗಿನ ವಿರುದ್ಧ ಹೋರಾಡಲು ಭಯೋತ್ಪಾದನೆ ನಿಗ್ರಹ ನಿರ್ಬಂಧಗಳ ವ್ಯವಸ್ಥೆಯನ್ನು ವಿಕಸನಗೊಳಿಸಿದೆ. ಇದು ಭಯೋತ್ಪಾದನೆಯನ್ನು ಸರಕಾರಿ ಅನುದಾನಿತ ಉದ್ಯಮವನ್ನಾಗಿ ಪರಿವರ್ತಿಸಿರುವ ದೇಶಗಳ ಮೇಲೆ ನಿಗಾಯಿರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಅವರು ಹೇಳಿದರು.

ಇದರ ಹೊರತಾಗಿಯೂ ಭಯೋತ್ಪಾದನೆಯ ಬೆದರಿಕೆಯು, ವಿಶೇಷವಾಗಿ ಏಶ್ಯಾ ಮತ್ತು ಆಫ್ರಿಕಾದಲ್ಲಿ ಬೆಳೆಯುತ್ತಲೇ ಇದೆ, ಹರಡುತ್ತಲೇ ಇದೆ. ನಿರ್ಬಂಧಗಳ ಸಮಿತಿಯ ಮೇಲ್ವಿಚಾರಣಾ ವರದಿಗಳು ಇದನ್ನು ಸತತವಾಗಿ ಬೆಟ್ಟು ಮಾಡಿವೆ ಎಂದೂ ಜೈಶಂಕರ ಹೇಳಿದರು.

Similar News