×
Ad

ಮುಸ್ಲಿಮರ ಭಯ ಹುಟ್ಟಿಸಿ ರೈತರಿಂದ ಭೂಮಿ ಖರೀದಿಸಿದ ಹಿಂದುತ್ವ ಮುಖಂಡ: ಆರೋಪ

Ndtv.com ವರದಿ

Update: 2022-10-29 20:28 IST

ಖಾರ್ಗೋನ್: ಮುಸ್ಲಿಮರ ಭಯ ಹುಟ್ಟಿಸಿ ಮಧ್ಯಪ್ರದೇಶದಲ್ಲಿ ಹಿಂದುತ್ವ ಸಂಘಟನೆಯೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳು 200 ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿಮ್ಮ ಪ್ರದೇಶದಲ್ಲಿ ಮುಸ್ಲಿಮರ ವಸತಿ ಯೋಜನೆ ಬರುತ್ತಿದೆ ಎಂದು ಸ್ಥಳೀಯ ಸಣ್ಣ ಪ್ರಮಾಣದ ರೈತರನ್ನು, ನಿವಾಸಿಗಳನ್ನು ಹೆದರಿಸಿ ಅವರ ಸ್ಥಳವನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆಂಬ ಆರೋಪ ಸ್ಥಳೀಯ ಹಿಂದುತ್ವವಾದಿ ಮುಖಂಡ, ಬಿಜೆಪಿ ನಾಯಕ ರಂಜೀತ್ ದಂಡಿರ್ ವಿರುದ್ಧ ಕೇಳಿಬಂದಿದೆ.

2000 ರ ದಶಕದಲ್ಲಿ ಖಾರ್ಗೋನ್ ಪಟ್ಟಣದ ಹೊರವಲಯದಲ್ಲಿರುವ ಭೂಮಿಯನ್ನು ಮಾರಾಟ ಮಾಡಿದ ಜನರು ಈ ಪ್ರದೇಶದಲ್ಲಿ ಈಗ ವಸತಿ ಕಾಲೋನಿ ರೂಪುಗೊಳ್ಳುತ್ತಿರುವುದರಿಂದ ವಿಚಾರಣೆಗಾಗಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. "ಇದು ಮುಸ್ಲಿಂ ಪ್ರದೇಶವಾಗುತ್ತದೆ ಎಂದು ನಮಗೆ ಹೇಳಿದ್ದರಿಂದ" ನಾವು ಭೂಮಿಯನ್ನು ಮಾರಾಟ ಮಾಡಿದ್ದೇವೆ, ತಾವು ಮೋಸ ಹೋಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಆಡಳಿತಾರೂಢ ಬಿಜೆಪಿಯ ನಾಯಕ ರಂಜೀತ್ ಸಿಂಗ್ ದಂಡಿರ್ ನೇತೃತ್ವದ ಗುಂಪು 2007 ರಲ್ಲಿ "ಪ್ರೊಫೆಸರ್ ಪಿಸಿ ಮಹಾಜನ್ ಫೌಂಡೇಶನ್" ಗೆ ಒಪ್ಪಂದ ಮಾಡಿದ ನಂತರ "ತಂಝೀಮ್-ಎ-ಝಾರ್ಖೆಜ್" ಎಂಬ ಉರ್ದು ಹೆಸರಿನ ಸಂಘಟನೆ ಮೂಲಕ  ರೈತರಿಂದ ಭೂಮಿ ಖರೀದಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ಅದರ ಅಧಿಕಾರಿಗಳು ಯಾವುದೇ ಕುತಂತ್ರವನ್ನು ನಿರಾಕರಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

"ನಾವು ಭೂಮಿಯನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದೇವೆ" ಎಂದು ಫೌಂಡೇಶನ್‌ನ ನಿರ್ದೇಶಕ ರವಿ ಮಹಾಜನ್ ಹೇಳಿದ್ದಾರೆ. ವಸತಿ ನಿವೇಶನಗಳ ಜೊತೆಗೆ ಬಿಡಾಡಿ ಹಸುಗಳಿಗೆ ಗೋಶಾಲೆ ಅಥವಾ ಆಶ್ರಯ ತಾಣವನ್ನೂ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದುವರೆಗೂ ಈ ಬಗ್ಗೆ ಪೊಲೀಸರು ಮತ್ತು ಆಡಳಿತ ಅಧಿಕೃತವಾಗಿ ಯಾವುದೇ ರೀತಿ ಪ್ರತಿಕ್ರಿಯಿಸಲಿಲ್ಲ.

ಅದಾಗ್ಯೂ, ಈ ವಿವಾದದಿಂದ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, "ನಮ್ಮ ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಮಸ್ಯೆ ಮಾರಾಟಗಾರ ಮತ್ತು ಖರೀದಿದಾರರ ನಡುವೆ ಇದೆ ಮತ್ತು ಅವರಿಗೆ ತಮ್ಮದೇ ಆದ ಆರ್ಥಿಕ ಹಿತಾಸಕ್ತಿ ಇದೆ" ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರ್ವಾಲ್ ಹೇಳಿದ್ದಾರೆ.

ತಮ್ಮನ್ನು ಸಂಪರ್ಕಿಸುವ ಏಜೆಂಟ್‌ಗಳು ಮುಸ್ಲಿಮರು ಎಂದು ಭಾವಿಸಿ ತಮ್ಮ ಭೂಮಿಯಿಂದ "ಮೋಸ" ಮಾಡಲಾಗಿದೆ ಎಂದು ರೈತರು ಹೇಳಿದ್ದಾರೆ.

"2004 ರಲ್ಲಿ ಝಾಕಿರ್ ಎಂಬ ವ್ಯಕ್ತಿ ನಮ್ಮ ಬಳಿಗೆ ಬಂದು ನಮ್ಮ ಸುತ್ತಮುತ್ತಲಿನ ಎಲ್ಲಾ ಭೂಮಿಯನ್ನು ಖರೀದಿಸಿದ್ದೇನೆ ಎಂದು ಹೇಳಿದಾಗ ನಾನು ನನ್ನ ಭೂಮಿಯನ್ನು ಮಾರಾಟ ಮಾಡಿದ್ದೇನೆ" ಎಂದು ನಂದಕಿಶೋರ್ ಕುಶ್ವಾಹ ಎಂಬವರು ತಿಳಿಸಿದ್ದಾರೆ. "ಇಲ್ಲಿ ಶೀಘ್ರದಲ್ಲೇ ಕಸಾಯಿಖಾನೆ ಬರುತ್ತದೆ ಎಂದು ಅವರು ನಮಗೆ ಹೇಳಿದರು. 'ನಿಮ್ಮ ಭೂಮಿಯನ್ನು ಮುಸ್ಲಿಮರಿಗೆ ಮಾರಾಟ ಮಾಡಿ. ಹೇಗಾದರೂ ನಮ್ಮ ಸಮುದಾಯವು ಇಲ್ಲಿ ನೆಲೆಸುತ್ತದೆ,' ಎಂದು ನಮ್ಮನ್ನು ಮೋಸಗೊಳಿಲಾಯಿತು ಎಂದು ಅವರು ಆರೋಪಿಸಿದ್ದಾರೆ.

ಈ ಪ್ರದೇಶದಲ್ಲಿ ಹಜ್ ಸಮಿತಿಯನ್ನು ರಚಿಸಲಾಗುವುದು ಮತ್ತು ಸ್ಮಶಾನವನ್ನು ಸಹ ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ ಎಂದು ಭೂಮಿ ಮಾರಿದ ಇತರರು ಹೇಳಿದ್ದಾರೆ.

ತಂಝೀಮ್-ಎ-ಝಾರ್ಖೆಜ್ ಅನ್ನು 2002 ರಲ್ಲಿ ಹಿಂದೂಗಳ ಗುಂಪು ರಚಿಸಿ, ಝಾಕಿರ್ ಶೇಖ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು. ವಿವಾದದ ಬಗ್ಗೆ NDTV ಜೊತೆಗೆ ಮಾತನಾಡಿದ ಝಾಕಿರ್‌, “ಸಂಸ್ಥೆಯು ಸಾಮಾಜಿಕ ಉದ್ದೇಶಕ್ಕಾಗಿ ಕೆಲಸ ಮಾಡುವುದು ಎಂದು ನಾನು ಭಾವಿಸಿದೆ. ಆದರೆ ನಾನು ಯಾರನ್ನೂ ಅವರ ಭೂಮಿಯನ್ನು ಮಾರಾಟ ಮಾಡುವಂತೆ ಒತ್ತಾಯಿಸಲಿಲ್ಲ ಅಥವಾ ದಾರಿ ತಪ್ಪಿಸಲಿಲ್ಲ. ಪ್ರಕಾಶ್ ಸ್ಮೃತಿ ಸೇವಾ ಸಂಸ್ಥಾನ ಎಂಬ ಅದೇ ಗುಂಪಿನಿಂದ ರಚಿಸಲ್ಪಟ್ಟ ಮತ್ತೊಂದು ಸಂಸ್ಥೆಯು ಕೆಲವು ಭೂಮಿಯನ್ನು ಖರೀದಿಸಿದೆ” ಎಂದು ಹೇಳಿದ್ದಾರೆ.

200 ಎಕರೆಯಲ್ಲಿ, 150 ಎಕರೆಯನ್ನು 11 ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಖರೀದಿಸಲಾಗಿದೆ. ಉಳಿದ ಜಮೀನು ಸಣ್ಣ ರೈತರಿಗೆ ಸೇರಿತ್ತು ಎಂದು ndtv.com ವರದಿ ಮಾಡಿದೆ.

ಬಬ್ಲು ಖಾನ್ ಎಂಬ ವ್ಯಕ್ತಿ ತನ್ನ ತಂದೆಯ ಬಳಿಗೆ ಬಂದನು, "ನಾವು ನಮ್ಮಲ್ಲಿದ್ದ ಒಂಬತ್ತು ಎಕರೆಗಳನ್ನು ಮಾರಾಟ ಮಾಡಿದ್ದೇವೆ" ಎಂದು ರೈತರಲ್ಲಿ ಒಬ್ಬರಾದ ದೀಪಕ್ ಕುಶ್ವಾಹ ಹೇಳಿದ್ದಾರೆ.

 “ಹಜ್ ಸಮಿತಿ ರಚಿಸಲಾಗುವುದು, ಮುಸ್ಲಿಮರು ಇಲ್ಲಿ ನೆಲೆಸುತ್ತಾರೆ ಎಂದು ನನ್ನ ಸಂಬಂಧಿಕರು ಭಾವಿಸಿದ್ದರು - ಅದಕ್ಕಾಗಿಯೇ ಅವರು ಭಯಭೀತರಾಗಿ ಭೂಮಿಯನ್ನು ಮಾರಾಟ ಮಾಡಿದರು. ಕೊನೆಯಲ್ಲಿ, ನಾನು ನನ್ನ ಭೂಮಿ ಮಾರಿದೆ.” ಎಂದು ಸಂಜಯ್ ಸಿಂಘ್ವಿ ಎಂಬ ಉದ್ಯಮಿ ತಿಳಿಸಿದ್ದಾರೆ

ಈ ಬಗ್ಗೆ ಎನ್‌ಡಿಟಿವಿಯೊಂದಿಗೆ ಪ್ರತಿಕ್ರಿಯಿಸಿದ ಟ್ರಸ್ಟ್‌ನ ಮುಖ್ಯಸ್ಥ, ಬಿಜೆಪಿ ನಾಯಕ ರಂಜೀತ್ ದಂಡಿರ್, "ನಾನು ಚಿರಪರಿಚಿತನಾಗಿರುವುದರಿಂದ ನನ್ನ ಹೆಸರನ್ನು ಈ ಎಲ್ಲದಕ್ಕೂ ಎಳೆಯಲಾಗುತ್ತಿದೆ" ಎಂದು ಹೇಳಿದರು. “ನಾನು ಏಳು ಬಾರಿ ಜೈಲು ಪಾಲಾಗಿದ್ದೇನೆ; ನನ್ನ ಮೇಲೆ ಕೊಲೆ ಆರೋಪಗಳಿವೆ - ಏಕೆಂದರೆ ನನ್ನ ಜೀವನದುದ್ದಕ್ಕೂ ನಾನು ಹಿಂದೂ ಸಮಾಜಕ್ಕಾಗಿ ಕೆಲಸ ಮಾಡಿದ್ದೇನೆ.” ಎಂದು ಅವರು ಹೇಳಿದ್ದಾರೆ.

ಸಂಸ್ಥೆಯ ಹೆಸರು ಮತ್ತು ಭೂಮಿ ಖರೀದಿಯ ಬಗ್ಗೆ ಮಾತನಾಡದ ಅವರು, “ನಮಗೆ ಖಾರ್ಗೋನ್‌ ನಲ್ಲಿ ಗೋಶಾಲೆ ಬೇಕು. ಇಲ್ಲಿ ಒಂದನ್ನು ನಿರ್ಮಿಸಿ ಸಮಾಜಕ್ಕೆ ಮತ್ತು ಗೋವುಗಳಿಗೆ ಏನಾದರೂ ಒಳ್ಳೆಯದನ್ನು ಮಾಡಬಹುದು ಎಂದು ನಾನು ಭಾವಿಸಿದೆ. ನಾವು ಅದಕ್ಕೆ ತಂಝೀಮ್-ಎ-ಝಾರ್ಖೆಜ್ ಎಂದು ಹೆಸರಿಟ್ಟರೆ ಏನು ಸಮಸ್ಯೆ ಎಂದು ನನಗೆ ತಿಳಿದಿಲ್ಲ.” ಎಂದು ಹೇಳಿದ್ದಾರೆ.

ಶ್ರೀ ದಂಡೀರ್ ಅವರು ಈ ಹಿಂದೆ ಬಜರಂಗದಳದ ರಾಜ್ಯ ಸಹ ಸಂಚಾಲಕರಾಗಿದ್ದರು ಮತ್ತು ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಕೃಪೆ: Ndtv.com  

Similar News