2022 ಫೆಲೆಸ್ತೀನಿಯನ್ನರಿಗೆ ಭಯಾನಕ ವರ್ಷ: ಒಂದೇ ವರ್ಷದಲ್ಲಿ ಹಿಂಸಾಚಾರದಲ್ಲಿ ಈವರೆಗೆ 125 ಮಂದಿ ಬಲಿ; ವಿಶ್ವಸಂಸ್ಥೆ

Update: 2022-10-29 15:52 GMT

 ನ್ಯೂಯಾರ್ಕ್, ಅ.30: 2005ರಿಂದೀಚೆಗೆ ವಿಶ್ವಸಂಸ್ಥೆ(United Nations)ಯು ಪಶ್ಚಿಮದಂಡೆಯಲ್ಲಿನ ಸಾವುನೋವಿನ ಘಟನೆಗಳನ್ನು ದಾಖಲಿಸಿಕೊಳ್ಳುತ್ತಾ ಬಂದಿದ್ದು, ಆ ಪೈಕಿ 2022ನೇ ಇಸವಿಯು ಪಶ್ಚಿಮದಂಡೆಯಲ್ಲಿರುವ ಫೆಲೆಸ್ತೀನಿಯರಿಗೆ ಅತ್ಯಂತ ಮಾರಣಾಂತಿಕ ವರ್ಷವಾಗಿದೆ ಎಂದು ವಿಶ್ವಸಂಸ್ಥೆಯ ಮಧ್ಯಪ್ರಾಚ್ಯ ರಾಯಭಾರಿ ಶನಿವಾರ ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಅತ್ಯಂತ ಸ್ಫೋಟಕ ಸನ್ನಿವೇಶವಿದ್ದು ಅದನ್ನು ಶಾಂತಗೊಳಿಸಲು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಇಸ್ರೇಲಿ-ಫೆಲೆಸ್ತೀನ್ (Israeli-Palestinian)ನಡುವೆ ಸಂಧಾನ ಮಾತುಕತೆಗಳ್ನು ಪುನರುಜ್ಜೀವನಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.

 ‘‘ಉಲ್ಬಣಿಸುತ್ತಿರುವ ನಿರಾಶೆ, ಕ್ರೋಧ ಹಾಗೂ ಉದ್ವಿಗ್ನತೆಯ ವರ್ತುಲವನ್ನು ಶಮನಗೊಳಿಸುವುದು ತುಂಬಾ ಕಷ್ಟಕರವಾಗಿದೆ ಹಾಗೂ ಈ ಹಿಂಸಾಚಾರದಲ್ಲಿ ಹಲವಾರು ಮಂದಿ ಅದರಲ್ಲೂ ಫೆಲೆಸ್ತೀನಿಯರು ಅಧಿಕ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಇಲ್ಲವೇ ಗಾಯಗೊಂಡಿದ್ದಾರೆ’’ ಎಂದು ವೆನ್ಸೆಸ್ಲ್ಯಾಂಡ್ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ.

   ‘‘ಪರಿಸ್ಥಿತಿಯನ್ನು ಶಾಂತಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವುದಕ್ಕೆ ಆದ್ಯತೆ ನೀಡ ಬೇಕಾಗಿದೆ. ಫೆಲೆಸ್ತೀನ್ ಪ್ರಾಧಿಕಾರವನ್ನು ಸಬಲೀಕರಣಗೊಳಿಸಲು ಹಾಗೂ ಪ್ರದೇಶದಲ್ಲಿ ರಾಜಕೀಯ ಪ್ರಕ್ರಿಯೆಯೆಡೆಗೆ ವಾಪಸಾಗುವಂತಹ ವಾತಾವರಣವನ್ನು ನಿರ್ಮಿಸಬೇಕಾಗಿದೆ’’ ಎಂಬುದೇ ಫೆಲೆಸ್ತೀನ್ ಅಧಿಕಾರಿಗಳಿಗೆ ಹಾಗೂ ಬಣಗಳಿಗೆ, ಇಸ್ರೇಲಿ ಅಧಿಕಾರಿಗಳಿಗೆ ಹಾಗೂ ಅಂತಾರಾಷ್ಟ್ರೀಯತ ಸಮುದಾಯಕ್ಕೆ ಇತ್ತೀಚಿನ ವಾರಗಳಲ್ಲಿ ತಾನು ನೀಡುತ್ತಿರುವ ಸ್ಪಷ್ಟವಾದ ಸಂದೇಶವಾಗಿದೆ ಎಂದು ವೆನ್ನೆಸ್ಲ್ಯಾಂಡ್ ತಿಳಿಸಿದ್ದಾರೆ.

   ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಪಶ್ಚಿಮದಂಡೆಯಲ್ಲಿ ನಡೆದ ವಿವಿಧ ಪ್ರತಿಭಟನೆ, ಶೋಧಕಾರ್ಯಾಚರಣೆ, ದಾಳಿ ಘಟನೆಗಳಲ್ಲಿ ಆರು ಮಂದಿ ಮಕ್ಕಳು ಸೇರಿದಂತೆ 32 ಮಂದಿ ಫೆಲೆಸ್ತೀನಿಯರು ಇಸ್ರೇಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ ಹಾಗೂ 311 ಮಂದಿ ಗಾಯಗೊಂಡಿದ್ದಾರೆ. ಫೆಲೆಸ್ತೀನಿಯರು ನಡೆಸಿದ ಗುಂಡೆಸೆತ,ದಾಳಿ ಮತ್ತು ಘರ್ಷಣೆಗಳಲ್ಲಿ ಇಬ್ಬರು ಇಸ್ರೇಲಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಇಸ್ರೇಲಿ ನಾಗರಿಕರು ಗಾಯಗೊಂಡಿದ್ದಾ ಎಂದವರು ಹೇಳಿದ್ದಾರೆ.

ಈ ವರ್ಷ ಪಶ್ಚಿಮದಂಡೆ ಹಾಗೂ ಪೂರ್ವ ಜೆರುಸಸಲೇಂನಲ್ಲಿ ಇಸ್ರೇಲಿ ಭದ್ರತಾ ಪಡೆಗಳು ಹಾಗೂ ಫೆಲೆಸ್ತೀನಿಯರ ನಡುವೆ ನಡೆದ ಘರ್ಷಣೆಗಳಲ್ಲಿ 125ಕ್ಕೂ ಅಧಿಕ ಫೆಲೆಸ್ತೀನಿಯರು ಸಾವನ್ನಪ್ಪಿದ್ದು, ಸೆಪ್ಟೆಂಬರ್ನಲ್ಲಿ ಹಿಂಸಾಚಾರದ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ ಎಂದು ವೆನ್ಸ್ಲ್ಯಾಂಡ್ ತಿಳಿಸಿದ್ದಾರೆ.

Similar News