×
Ad

ಬಿಲ್ಲವ, ಈಡಿಗರಿಗೆ ಪ್ರತ್ಯೇಕ ನಿಗಮ ರಚನೆಗೆ ಆಗ್ರಹಿಸಿ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ

'ಬೇಡಿಕೆ ಈಡೇರುವವರೆಗೆ ಆಮರಣಾಂತ ಉಪವಾಸ ಧರಣಿ'

Update: 2022-10-30 15:28 IST

ಬೆಂಗಳೂರು, ಅ.30: ರಾಜ್ಯದಲ್ಲಿರುವ ಬಿಲ್ಲವ, ಈಡಿಗ ಸೇರಿದಂತೆ 26 ಪಂಗಡಗಳ ಅಭಿವೃದ್ಧಿ ದೃಷ್ಟಿಯನ್ನಿಟ್ಟುಕೊಂಡು ರಾಜ್ಯ ಸರಕಾರ ನಿಗಮ ಮಂಡಳಿ ರಚಿಸಬೇಕು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳೂರಿನಿಂದ ಬೆಂಗಳೂರಿಗೆ 658 ಕಿ.ಮೀ. ಪಾದಯಾತ್ರೆ ಮಾಡಲಿದ್ದೇನೆ ಎಂದು ಕಲಬುರಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

ನಗರದ ಕುದ್ರೋಳಿ ದೇವಸ್ಥಾನದ ಗಾಜಿನ ಮಂಟಪದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಜ.6ರಂದು ಕುದ್ರೋಳಿ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಲಿದ್ದು, ಬಿಲ್ಲವ ಮುಖಂಡ, ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ತೆಲಂಗಾಣ, ಕೇರಳ, ಆಂಧ್ರ ಪ್ರದೇಶದ ಸಿಎಂ, ಸಮುದಾಯದ ಸಚಿವರು, ಶಾಸಕರನ್ನು ಪಾದಯಾತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಮಂಗಳೂರಿನಿಂದ ಹೊರಟ ಪಾದಯಾತ್ರೆ ಉಡುಪಿ, ಹೊಸನಗರ, ತೀರ್ಥಹಳ್ಳಿ, ಸಾಗರ, ಶಿವಮೊಗ್ಗ, ಶಿಕಾರಿಪುರ, ಚನ್ನಗಿರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರಿಗೆ ಸುಮಾರು 658ಕಿ.ಮೀಟರ್ ದೂರ 35 ದಿನಗಳವರೆಗೆ ಪಾದಯಾತ್ರೆ ನಡೆಯಲಿದೆ. ಇದಾದ ಬಳಿಕ ಬೇಡಿಕೆ ಈಡೇರುವ ತನಕ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಮರಣಾಂತ ಉಪವಾಸ ಕೈಗೊಳ್ಳಲಾಗುವುದು ಎಂದರು.

ಪಾದಯಾತ್ರೆ ಹಿನ್ನಲೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಸಮುದಾಯ ಸಂಘಟನೆ ಬಲಪಡಿಸಲಾಗುವುದು. ಬಿಲ್ಲವ, ಈಡಿಗ ಸಮುದಾಯದಲ್ಲಿ ನಾನಾ ಸಂಘಟನೆಗಳಿದ್ದು ಅವರನ್ನೆಲ್ಲ ಒಟ್ಟುಗೂಡಿಸಿ ಪಾದಯಾತ್ರೆ ನಡೆಸಲಾಗುವುದು ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಬಿಲ್ಲವ ತಾಲೂಕು ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣ, ಗೌರವಾಧ್ಯಕ್ಷ ರಂಜನ್ ಮಿಜಾರು, ಪಾರ್ವತಿ ಅಮೀನ್, ಲೋಕನಾಥ್ ಪೂಜಾರಿ, ಗಣೇಶ್ ಪೂಜಾರಿ, ಸುರೇಶ್‌ಚಂದರ್ ಕೋಟ್ಯಾನ್, ಸುರೇಶ್ ಪೂಜಾರಿ ಉಪಸ್ಥಿತರಿದ್ದರು.


ಆದೇಶ ಪ್ರತಿ ಹರಿದು ಹಾಕಿದ ಸ್ವಾಮೀಜಿ

ಬಿಲ್ಲವ, ಈಡಿಗ ಸೇರಿದಂತೆ 26ಪಂಗಡಗಳ ಅಭಿವೃದ್ಧಿ ದೃಷ್ಟಿಯಿಂದ ಶ್ರೀ ನಾರಾಯಣಗುರು ಕೋಶವನ್ನು ರಾಜ್ಯ ಸರಕಾರ ಸ್ಥಾಪನೆ ಮಾಡುವ ಬಗ್ಗೆ ಶನಿವಾರ ಆದೇಶ ಮಾಡಿದ್ದು, ಇದರ ಝೆರಾಕ್ಸ್ ಪ್ರತಿಯನ್ನು ಸ್ವಾಮೀಜಿ ಹರಿದು ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದರು.

ನಾವು ಸರಕಾರದ ಬಳಿ ನಿಗಮ ಮಂಡಳಿ ಬೇಡಿಕೆಯಿರಿಸಿದ್ದು, ನಮಗೆ ಕೋಶ ಘೋಷಣೆ ಮಾಡುವ ಮೂಲಕ ಸಮುದಾಯವನ್ನು ಅವಮಾನಿಸಲಾಗಿದೆ. ನಮಗೆ ಕೋಶ ಬೇಡ, ನಿಗಮವೇ ಬೇಕು. ರಾಜ್ಯ ಸರಕಾರ ಈ ರೀತಿಯ ನಾಟಕ ಮಾಡುವುದು ಬೇಡ. ನಾವು ಭಿಕ್ಷೆ ಬೇಡುತ್ತಿಲ್ಲ, ಸಾಂವಿಧಾನಿಕವಾಗಿ ನಮ್ಮ ಹಕ್ಕು ಕೇಳುತ್ತೇವೆ ಎಂದರು.


ಸ್ವಾಮೀಜಿಯ ಪ್ರಮುಖ ಬೇಡಿಕೆಗಳು

* ಬ್ರಹ್ಮಶ್ರೀ ನಾರಾಯಣಗುರು ನಿಗಮ ಮಂಡಳಿ ಸ್ಥಾಪನೆ ಮಾಡಿ 500 ಕೋಟಿ ರೂ. ಬಿಡುಗಡೆ ಮಾಡಬೇಕು

* ರಾಜ್ಯ ವ್ಯಾಪಿ ಕುಲಕಸುಬು ಶೇಂದಿಗೆ ಅವಕಾಶ ನೀಡಬೇಕು

* 2ಎ ಮೀಸಲಾತಿಗೆ ಬೇರೆ ಸಮುದಾಯ ಸೇರ್ಪಡೆ ಮಾಡುವಾಗ ಬಿಲ್ಲವ ಸಮುದಾಯಕ್ಕೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು

* ಸಿಗಂದೂರು ಚೌಡೇಶ್ವರಿ ದೇವಸ್ಥಾನ ಈಡಿಗ ಸಮುದಾಯ ನಡೆಸುತ್ತಿದ್ದು, ಆ ದೇವಸ್ಥಾನದ ಆಡಳಿತ ಮಂಡಳಿಗೆ ನೀಡುವ ಕಿರುಕುಳ ನಿಲ್ಲಿಸಬೇಕು.

* ರಾಜಕೀಯ ಪ್ರಾತಿನಿಧ್ಯ ದೃಷ್ಟಿಯಿಂದ ಇತರ ಜಿಲ್ಲೆಗಳಲ್ಲಿ  ಜನಸಂಖ್ಯೆ ಆಧಾರದಲ್ಲಿ ಸೀಟು ಹಂಚಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡೂ ಪಕ್ಷಗಳು ಬಿಲ್ಲವ ಸಮುದಾಯಕ್ಕೆ ತಲಾ 3 ಸೀಟುಗಳನ್ನು ನೀಡಬೇಕು.

Similar News