ಎರಡು ಬಾರಿ ಪ್ರಧಾನಿಯಾದ ಮೇಲೂ ಈ ನೀಚತನ ಏಕೆ? ಪ್ರಧಾನಿ ಮೋದಿ ವಿರುದ್ಧ ಕೆಸಿಆರ್‌ ವಾಗ್ದಾಳಿ

ಶಾಸಕರ ಖರೀದಿ ಪ್ರಯತ್ನ ಖಂಡಿಸಿ ಬಿಜೆಪಿ ವಿರುದ್ಧ ಹರಿಹಾಯ್ದ ತೆಲಂಗಾಣ ಸಿಎಂ

Update: 2022-10-30 12:51 GMT

ಹೈದರಾಬಾದ್: ತಮ್ಮ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ನಾಲ್ವರು ಶಾಸಕರಿಗೆ ದಿಲ್ಲಿ ದಲ್ಲಾಳಿಗಳು ಲಂಚ ನೀಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತೆಲಂಗಾಣದ ಫಾರ್ಮ್‌ಹೌಸ್‌ನಲ್ಲಿ ಬುಧವಾರ ನಡೆದ ʼಶಾಸಕರ ಖರೀದಿʼ ಪ್ರಕ್ರಿಯೆಯು ಉಪಚುನಾವಣೆಗೂ ಮುನ್ನ ರಾಜ್ಯದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ.

‘ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿಯ ರಾಜಕೀಯವನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಆರೋಪಿಸಿದ ಕೆಸಿಆರ್, ‘ನೇಕಾರರ ಕುಟುಂಬದ ಒಂದೇ ಒಂದು ಮತವೂ ಬಿಜೆಪಿಗೆ ಹೋಗದಂತೆ ನೋಡಿಕೊಳ್ಳುತ್ತೇನೆ’ ಎಂದಿದ್ದಾರೆ.

"ನಿಮಗೆ ಇನ್ನೇನು ಬೇಕು ಪಿಎಂ ಮೋದಿ? ಪ್ರಧಾನಿಗಿಂತ ದೊಡ್ಡ ಹುದ್ದೆ ಇಲ್ಲ, ಅಲ್ಲವೇ? ಒಂದಲ್ಲ ಎರಡು ಬಾರಿ ಪ್ರಧಾನಿಯಾದಿರಿ. ಆಗ ಯಾಕೆ ಈ ಗಲಾಟೆ? ಏಕೆ ಈ ನೀಚತನ? ಏಕೆ ಈ ಅರಾಜಕತೆ?" ಎಂದು ಅವರು ಪ್ರಶ್ನಿಸಿದ್ದಾರೆ.

ಅದಾಗ್ಯೂ, ಆಪರೇಶನ್‌ ಕಮಲ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ, ಇದು ಮುಖ್ಯಮಂತ್ರಿಯವರ ಚಿತ್ರಕಥೆ, ನಿರ್ದೇಶನ ಮತ್ತು ನಿರ್ಮಾಣದ ಹೊಸ ನಾಟಕ ಎಂದು ಹೇಳಿದೆ.

"ಕೆಲವು ದಿಲ್ಲಿ ದಲ್ಲಾಳಿಗಳು ತೆಲಂಗಾಣದ ಸ್ವಾಭಿಮಾನಕ್ಕೆ ಸವಾಲು ಹಾಕಲು ಬಂದರು... ಅವರು ನಾಲ್ವರು ಶಾಸಕರಿಗೆ ₹ 100 ಕೋಟಿ ನೀಡಿದರು" ಎಂದು ಕೆಸಿ ರಾವ್ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಬಂಧಿತರನ್ನು ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ನಂದ ಕುಮಾರ್ ಮತ್ತು ಸಿಂಹಯಾಜಿ ಸ್ವಾಮ್ಯತ್ ಎಂದು ಗುರುತಿಸಲಾಗಿದ್ದು, ಅವರನ್ನು 14 ದಿನಗಳ ಜೈಲು ಕಸ್ಟಡಿಗೆ ಕಳುಹಿಸಲಾಗಿದೆ.

“ತೆಲಂಗಾಣವನ್ನು ವಶಪಡಿಸಿಕೊಳ್ಳಲು ಅವರು (ಬಿಜೆಪಿ) ಬಯಸಿದ್ದರು... ನಾನು ರೈತರಿಗೆ ಹೇಳುತ್ತಿದ್ದೇನೆ.. ನಾವು ಮತ ​​ಚಲಾಯಿಸುವಾಗ ಎಚ್ಚರಿಕೆಯಿಂದ ಮತ ಚಲಾಯಿಸಬೇಕು. ಇಂತಹ ರಾಜಕೀಯದಿಂದ ನಾವು ಲಂಚ ಪಡೆಯುವುದಿಲ್ಲ, ಮೋಸ ಹೋಗುವುದಿಲ್ಲ” ಎಂದು ಕೆಸಿಆರ್ ಹೇಳಿದರು.

ಬುಧವಾರ ತೆಲಂಗಾಣ ರಾಷ್ಟ್ರ ಸಮಿತಿ ಶಾಸಕ ಪೈಲಟ್ ರೋಹಿತ್ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದು, ಬಿಜೆಪಿಗೆ ಸೇರಿದ ರಾಮಚಂದ್ರ ಭಾರತಿ ಮತ್ತು ನಂದಕುಮಾರ್ ತಮ್ಮನ್ನು ಭೇಟಿ ಮಾಡಿ ಬಿಜೆಪಿ ಸೇರಲು ₹ 100 ಕೋಟಿ ಆಮಿಷ ಒಡ್ಡಿದ್ದರು ಎಂದು ಆರೋಪಿಸಿದ್ದರು.

Similar News