×
Ad

ಉಡುಪಿ ಜಿಲ್ಲೆಯ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ

Update: 2022-10-30 21:18 IST

ಉಡುಪಿ: 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆಯ ನಾಲ್ಕು ಮಂದಿ ಸಾಧಕರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಎಂ.ಪ್ರಭಾಕರ್ ಜೋಷಿ

ತಾಳಮದ್ದಳೆ- ಯಕ್ಷಗಾನ ಕಲಾವಿದ ಕಾರ್ಕಳ ತಾಲೂಕಿನ ಮಾಳದ ಎಂ.ಪ್ರಭಾಕರ್ ಜೋಷಿ(76) ಅವರಿಗೆ ರಂಗಭೂಮಿ ಕ್ಷೇತ್ರದಲ್ಲಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

ಇವರ ತಂದೆ ನಾರಾಯಣ ಜೋಷಿ ಪ್ರಸಿದ್ಧ ವಿದ್ವಾಂಸರು ಹಾಗೂ ವಾಗ್ಮಿ ಗಳು. ಇವರು ಯಕ್ಷಗಾನ ಅರ್ಥಧಾರಿ ಅನಿರುದ್ಧ ಭಟ್ಟರಲ್ಲಿ ಯಕ್ಷಗಾನ ಕಲಿತರು. ಎಂ.ಕಾಂ ಪದವೀಧರಾದ ಜೋಷಿ, ಹಿಂದಿ ಸಾಹಿತ್ಯ ರತ್ನ ಹಾಗೂ ಯಕ್ಷಗಾನ ದಲ್ಲಿ ಕೃಷ್ಣ ಸಂಧಾನ ಪ್ರಸಂಗ ವಿಷಯದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದರು.

ವಿಮರ್ಷಕರು ಆಗಿರುವ ಇವರು, ವಿದೇಶಗಳಲ್ಲೂ ಯಕ್ಷಗಾನದ ನೂರಾರು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಇವರು ನೂರಾರು ಕೃತಿಗಳನ್ನು ರಚಿಸಿದ್ದು, ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ, ಜಾಗರ, ಕೇದಗೆ ಮಾರುಮಾಲೆ, ಪ್ರಸ್ತುತ, ವಾಗಾರ್ಥ, ಪದಕೋಶ, ವಾಗಾರ್ಥ ಯಕ್ಷಗಾನ ಪದಕೋಶ, ಮುಡಿ, ತಾಳಮದ್ದಲೆ ಇವರ ಪ್ರಮುಖ ಕೃತಿಗಳು. 2016ರ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಶೇಣಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಕುಬೆವೂರು ಪ್ರಶಸ್ತಿ, ಕುರಿಯ ಪ್ರಶಸ್ತಿ, ಯಕ್ಷ ಸಂಗಮ ಮೂಡಬಿದ್ರಿ ಪ್ರಶಸ್ತಿ, ದುಬೈ- ಬೆಹ್ರೈನ್‌ನಂಥಹ ವಿದೇಶಗಳಲ್ಲಿ ಸಹಿತ ನೂರಾರು ಸನ್ಮಾನಗಳು ಸಂದಿವೆ.

ತಾಳಮದ್ದಳೆ ಕೂಟಗಳಲ್ಲಿ ಪ್ರಧಾನ ಅರ್ಥಧಾರಿಗಳಾಗಿ ಕಿರಿಯ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ವಾಲಿ, ಸುಗ್ರೀವ, ಶ್ರೀರಾಮ, ಧರ್ಮರಾಯ, ಭೀಮ, ರಾವಣ, ಕೌರವ, ಶ್ರೀಕೃಷ್ಣ, ಅತಿಕಾಯ, ಅರ್ಜುನ, ಭರತ, ಭೀಷ್ಮ, ಶೂರ್ಪಣಖಿ, ಪರಶುರಾಮ ಮುಂತಾದವು ಜೋಷಿಯವರ ಪ್ರಮುಖ ಪಾತ್ರಗಳಾಗಿವೆ.

ದೈವನರ್ತಕ ಗುಡ್ಡ ಪಾಣಾರ

ಕಾಪು ತಾಲೂಕಿನ ಮೂಳೂರು ಗ್ರಾಮದ ನಿವಾಸಿ ಗುಡ್ಡ ಪಾಣಾರ (67) ಅವರಿಗೆ ಜಾನಪದ ಕ್ಷೇತ್ರದಲ್ಲಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಇವರು ತಮ್ಮ 25ನೇ ವಯಸ್ಸಿನಲ್ಲಿ ಕಾಪು ಮಾರಿಗುಡಿಯ ಪ್ರಸಿದ್ಧ ಪಿಲಿ ಕೋಲದಿಂದ ದೈವನರ್ತನವನ್ನು ಆರಂಭಿಸಿದರು. ಅಂದಿನ ಸುಪ್ರಸಿದ್ಧ ದೈವ ನರ್ತಕರಾಗಿದ್ದ ತಂದೆ ನಾಣು ಪಾಣಾರರಿಂದ ದೈವನರ್ತನ ಕಲೆಯನ್ನು ಕರಗತ ಮಾಡಿಕೊಂಡ ಗುಡ್ಡ ಪಾಣಾರ ಆರಂಭದಲ್ಲಿ ಕುಂಞರಾವತ, ಪಂಜುರ್ಲಿ, ಕೊರ್ದಬ್ಬು, ವರ್ತೆ, ರಾವು, ಗುಳಿಗ ಇತ್ಯಾದಿ ದೈವಗಳ ಕೋಲಗಳನ್ನೂ ಮಾಡಿದ್ದರು.

ಆದರೇ ಇತ್ತೀಚೆಗೆ 2 ವರ್ಷಕ್ಕೊಮ್ಮೆ ನಡೆಯುವ ಪಿಲಿ ಕೋಲದಲ್ಲಿ ಮಾತ್ರ ಭಾಗವಹಿಸುತಿದ್ದಾರೆ. ಅವರು ಇಬ್ಬರು ಮಕ್ಕಳಲ್ಲಿ ಕಿರಿಯವ ಕೂಡ ತಂದೆಯಿಂದ ಕಲೆಯನ್ನು ಕಲಿತು ದೈವನರ್ತಕರಾಗಿದ್ದಾರೆ.

ಯಕ್ಷಗಾನ ಕಲಾವಿದ ಎಂ.ಎ.ನಾಯ್ಕ

ಯಕ್ಷಗಾನ ಹಿರಿಯ ಸ್ತ್ರೀವೇಷಧಾರಿ ಮಂದಾರ್ತಿ ಅಣ್ಣಪ್ಪ ಮರಕಾಲ ಯಾನೆ ಎಂ.ಎ.ನಾಯ್ಕ(70) ಅವರಿಗೆ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

ಕರಿಯ ಮರಕಾಲ ಮತ್ತು ಬುಡ್ಡು ಮರಕಾಲ್ತಿ ದಂಪತಿಯ ಪುತ್ರನಾಗಿರುವ ಇವರು, ವಿದ್ಯಾರ್ಥಿ ಜೀವನವನ್ನು ಮಂದಾರ್ತಿ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರಾರಂಭಿಸಿ, ಆರನೇ ತರಗತಿಯಲ್ಲಿಯೇ ಓದಿಗೆ ತಿಲಾಂಜಲಿ ಇಟ್ಟರು. ಬಾಲ್ಯದಿಂದ ಬಣ್ಣದ ಬದುಕಿನೆಡೆಗೆ ದಾಪುಗಾಲಿರಿಸಿದ ಇವರು, ಹಿರಿಯ ಯಕ್ಷ ಗಾನ ಕಲಾವಿದ ಭಾಗವತ ನಾರಾಯಣ ಉಪ್ಪೂರುರರ ಶಿಷ್ಯರಾಗಿ ತರಬೇತಿ ಪಡೆದರು.

13ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಬಂದ ಇವರು, ಮಂದಾರ್ತಿ, ಅಮೃತೇಶ್ವರಿ, ಶಿರಸಿ ಮಾರಿಕಾಂಭ, ಇಡಗುಂಜಿ, ಪಂಚಲಿಂಗೇಶ್ವರ, ಮುಲ್ಕಿ ಮೇಳಗಳಲ್ಲಿ ಒಟ್ಟು 42 ವರ್ಷಗಳ ಕಾಲ ಪ್ರಧಾನ ಸ್ತ್ರೀ ವೇಷಧಾರಿಯಾಗಿ ಜನರನ್ನು ರಂಜಿಸಿದ್ದಾರೆ. ಇವರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.

ಹೊಟೇಲ್ ಉದ್ಯಮಿ ಜಯರಾಂ ಬನಾನ್

ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದ ಮಠದಬೆಟ್ಟುವಿನ ಜಯರಾಂ ಬನಾನ್ ಭಾಜನರಾಗಿದ್ದಾರೆ.

ತಮ್ಮ 13ನೇ ವಯಸ್ಸಿನಲ್ಲಿ ಮನೆಬಿಟ್ಟು, ಮುಂಬೈಗೆ ತೆರಳಿ ಅತ್ಯಂತ ಕಷ್ಟಗಳ ನಡುವೆಯೇ ಹಂತಹಂತವಾಗಿ ಯಶಸ್ಸಿನ ಮೆಟ್ಟಿಲೇರಿದ ಇವರು, ಕೇವಲ 5000 ರೂ. ಬಂಡವಾಳದೊಂದಿಗೆ ದೆಹಲಿಯ ಡಿಫೆನ್ಸ್ ಕಾಲನಿಯಲ್ಲಿ ಸಾಗರ್ ರತ್ನ ರೆಸ್ಟೋರೆಂಟ್ ಆರಂಭಿಸಿದರು.

ಇವರು ಸಾಗರ್ ರತ್ನ ಮತ್ತು ಶ್ರೀರತ್ನಂ ರೆಸ್ಟೋರೆಂಟ್‌ಗಳ ಮಾಲಕರಾಗಿದ್ದು,  ದೆಹಲಿಯಾದ್ಯಂತ ಸರಣಿ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದ್ದಾರೆ. ಮಂಗಳೂರು ಹಾಗೂ ಉಡುಪಿಯಲ್ಲೂ ಓಷಿಯನ್ ಪರ್ಲ್ ಹೋಟೆಲ್ ನಡೆಸುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ಸಾಗರ್ ರತ್ನ ಮತ್ತು ಶ್ರೀರತ್ನಂ ಹೆಸರಿನ ಸುಮಾರು 105ಕ್ಕೂ ಹೆಚ್ಚು ಶಾಖೆಗಳು ಮತ್ತು ಅದರ ಅಂಗಸಂಸ್ಥೆ ಸ್ವಾಗತ್ ಹೆಸರಿನಲ್ಲಿ ಇನ್ನಷ್ಟು ಶಾಖೆಗಳು ಸ್ಥಾಪಿತವಾಗಿವೆ.

ಇವರು ಸಾಧಿಸಿದ ಪ್ರಗತಿಯನ್ನು ‘ಇಂಕ್ ಇಂಡಿಯಾ’ ಎಂಬ ಇಂಗ್ಲಿಷ್ ನಿಯತಕಾಲಿಕೆ ಲೇಖನದಲ್ಲಿ ಬನಾನ್‌ರನ್ನು ’ಸಾಂಬಾರಿನ ಸುಲ್ತಾನ್’ ಎಂದು ಉಲ್ಲೇಖಿಸಿದೆ. ಗುಣಮಟ್ಟದ ಶುಚಿ-ರುಚಿಯಾದ ಆಹಾರಕ್ಕೆ ಇವರ ಸಂಸ್ಥೆಗಳು ಹೆಸರುವಾಸಿಯಾಗಿದೆ. ಇವರು ಉದ್ಯಮದೊಂದಿಗೆ ಸಮಾಜಮುಖಿ ಕಾರ್ಯ ದಲ್ಲಿ ತಮ್ಮನ್ನು ತೊಡಗಿಸಿಕೊಂಡಿ ದ್ದಾರೆ. ವಿವಿಧ ಸಂಸ್ಥೆಗಳು ದೇವಾಲಯಗಳಿಗೆ ಆರ್ಥಿಕ ಸಹಾಯ ಮಾಡುತ್ತಿರುವ ಇವರು, ಪ್ರತಿವರ್ಷ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿದ್ದಾರೆ. ಜಯರಾಂ ಬನಾನ್ ಮಾಲಿಕತ್ವದ ಜೆಆರ್‌ಬಿ ಸಂಸ್ಥೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿನ ಸಾವಿರಾರು ಮಂದಿಗೆ ಉದ್ಯೋಗ ಅವಕಾಶ ಒದಗಿಸಲಾಗಿದೆ.

Similar News