ಮೋದಿ, ಶಾ ನನಗೂ ಹರೇನ್ ಪಾಂಡ್ಯ ರೀತಿ ಮಾಡಲಾರರು ಎಂದು ಹೇಳಿದ ಸುಬ್ರಮಣ್ಯನ್ ಸ್ವಾಮಿ !

"ಆರೆಸ್ಸೆಸ್‌ ನ ಉನ್ನತ ಅಧಿಕಾರದಲ್ಲಿರುವವರನ್ನೂ ಇವರಿಬ್ಬರು ವಂಚಿಸಿದ್ದಾರೆ"

Update: 2022-10-31 07:33 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇರುವ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಇದೀಗ ಹೊಸದೊಂದು ಹೇಳಿಕೆ ನೀಡಿದ್ದು, ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಮೋದಿ ಮತ್ತು ಅಮಿತ್‌ ಶಾ ಇಬ್ಬರೂ ಸೇರಿ ನನ್ನನ್ನು 'ಹರೇನ್‌ ಪಾಂಡ್ಯರಂತೆ ಮಾಡುವುದಿಲ್ಲ' ಎಂದು ನಾನು ಭರವಸೆ ಇಟ್ಟಿದ್ದೇನೆ ಎಂದು ಅವರು ಸೋಮವಾರ  ಟ್ವಿಟರ್‌ ನಲ್ಲಿ ಹೇಳಿದ್ದಾರೆ.

ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್‌ ಮಾಡಿದ ಸುಬ್ರಮಣಿಯನ್‌ ಸ್ವಾಮಿ, "ಮೋದಿ ಮತ್ತು ಅಮಿತ್‌ ಶಾ ಇಬ್ಬರೂ ಸೇರಿ ನನ್ನನ್ನು ಹರೇನ್‌ ಪಾಂಡ್ಯರಂತೆ ಮಾಡುವುದಿಲ್ಲ ಎಂದು ನಾನು ಭರವಸೆ ಇಟ್ಟಿದ್ದೇನೆ. ಒಂದು ವೇಳೆ ಹಾಗಾದರೆ ನಾನು ನನ್ನ ಸ್ನೇಹಿತರನ್ನು ಎಚ್ಚರಿಸುವುದು ಅಗತ್ಯ. ನಾನು ಪಡೆದಷ್ಟು ಒಳ್ಳೆಯದನ್ನು ನೀಡುತ್ತೇನೆ ಎಂದು ನೆನಪಿಡಿ. ಆರೆಸ್ಸೆಸ್‌ ನ ಉನ್ನತ ಅಧಿಕಾರದಲ್ಲಿರುವವರನ್ನೂ ಇವರಿಬ್ಬರು ವಂಚಿಸಿದ್ದಾರೆ" ಎಂದು ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

"ಹಾಗಾದರೆ ಹರೇನ್‌ ಪಾಂಡ್ಯಾ ಕೊಲೆ ಪ್ರಕರಣದಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾರ ಪಾತ್ರವಿದೆ ಎಂದು ಹೇಳುತ್ತೀರಾ?" ಎಂಬ ವ್ಯಕ್ತಿಯೋರ್ವರ ಪ್ರಶ್ನೆಗೆ, "ಹರೇನ್‌ ಪಾಂಡ್ಯಾರನ್ನು ಬಿಜೆಪಿಯಲ್ಲಿ ಬದಿಗೆ ಸರಿಸಲಾಗಿತ್ತು" ಎಂದು ಸಮಜಾಯಿಷಿ  ನೀಡಿದ್ದಾರೆ.

ಹರೇನ್‌ ಪಾಂಡ್ಯ 2002 ರ  ಗುಜರಾತ್‌ ನ ಹಿಂಸಾಚಾರದ ಸಂದರ್ಭದಲ್ಲಿ ಗೃಹ ಮಂತ್ರಿಯಾಗಿದ್ದರು. ಗುಜರಾತ್‌ ಹತ್ಯಾಕಾಂಡಕ್ಕೂ ಮುಂಚೆ ಪ್ರಧಾನಿ ಮೋದಿಯವರು ಎಲ್ಲ ಹಿರಿಯ ಅಧಿಕಾರಿಗಳನ್ನ ಕರೆದು ಸಭೆ  ನಡೆಸಿದ್ದರು ಎಂಬ ಹೇಳಿಕೆಯನ್ನು  ಹರೇನ್‌ ಪಾಂಡ್ಯ ಹೇಳಿಕೆ ನೀಡಿದ್ದರು. ಆ ಬಳಿಕ ಬಿಜೆಪಿಯಲ್ಲಿ ಮೂಲೆ ಸೇರಿದ ಅವರು 2003 ರಲ್ಲಿ ವಾಕಿಂಗ್ ಗೆ ಹೋದಾಗ  ಕೊಲೆಯಾಗಿದ್ದರು.

Similar News