ವ್ಯಾಪಕ ಫಿರಂಗಿ ದಾಳಿಗೆ ನಲುಗಿದ ಉಕ್ರೇನ್ ವಿದ್ಯುತ್, ನೀರು ಪೂರೈಕೆ ವ್ಯವಸ್ಥೆಗೆ ಹಾನಿ
ಕೀವ್, ಅ.31: ಉಕ್ರೇನ್ (Ukraine)ರಾಜಧಾನಿ ಕೀವ್, ಖಾರ್ಕಿವ್ (Kharkiv)ಹಾಗೂ ಇತರ ನಗರಗಳ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿ ರಶ್ಯ ನಡೆಸಿದ ಭೀಕರ ಫಿರಂಗಿ ದಾಳಿ(Kharkiv)ಯಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆ ವ್ಯವಸ್ಥೆಗೆ ಹಾನಿಯಾಗಿದ್ದು ರಾಜಧಾನಿ ಕೀವ್ನ ಬಹುತೇಕ ಪ್ರದೇಶಗಳು ಕತ್ತಲಲ್ಲಿ ಮುಳುಗಿವೆ. ಖಾರ್ಕಿವ್ ಮತ್ತು ಝಪೋರಿಝಿಯಾ ನಗರಗಳಲ್ಲೂ ವ್ಯಾಪಕ ಹಾನಿಯಾದ ವರದಿಯಾಗಿದೆ.
ಚೆರ್ಕ್ಸೆ ವಲಯದಲ್ಲಿಯೂ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಹಲವೆಡೆ ಸ್ಫೋಟದ ಸದ್ದು ಕೇಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಖಾರ್ಕಿವ್ನಲ್ಲಿ ರೈಲು ಹಳಿಗಳಿಗೆ ಹಾನಿಯಾಗಿದ್ದು ವಿದ್ಯುತ್ ವ್ಯವಸ್ಥೆ ಸ್ಥಗಿತಗೊಂಡ ಕಾರಣ ರೈಲು ಸಂಚಾರ ಸ್ಥಗಿತವಾಗಿದೆ. `ರಶ್ಯವು ನಾಗರಿಕ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡ ದಾಳಿಗಳನ್ನು ಮುಂದುವರಿಸಿದೆ. ಆದರೆ ನಾವು ಇದಕ್ಕೆಲ್ಲಾ ಬಗ್ಗುವುದಿಲ್ಲ. ಈ ಅನ್ಯಾಯಕ್ಕೆ ರಶ್ಯನ್ನರ ತಲೆಮಾರುಗಳು ಬೆಲೆ ತೆರುವಂತೆ ಮಾಡುತ್ತೇವೆ' ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಆಂಡ್ರಿವ್ ಯೆರ್ಮಾಕ್ ಹೇಳಿದ್ದಾರೆ.