ಹ್ಯಾಲೋವೀನ್ ಕಾಲ್ತುಳಿತ ದುರಂತದಲ್ಲಿ ದಕ್ಷಿಣ ಕೊರಿಯಾದ ನಟ, ಗಾಯಕ ಲೀ ಜಿಹಾನ್ ಬಲಿ
Update: 2022-11-01 12:56 IST
ಸಿಯೋಲ್: ದಕ್ಷಿಣ ಕೊರಿಯಾದ ಖ್ಯಾತ ನಟ-ಗಾಯಕ ಲೀ ಜಿಹಾನ್ ಅವರು ಇತ್ತೀಚೆಗೆ ಸಿಯೋಲ್‍ನ ಇಟೇವೋನ್ ಜಿಲ್ಲೆಯಲ್ಲಿ ಹ್ಯಾಲೋವೀನ್ ಪಾರ್ಟಿಯಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರಲ್ಲಿ ಸೇರಿದ್ದಾರೆ. ಇಪ್ಪತ್ತ್ನಾಲ್ಕು ವರ್ಷದ ಜಿಹಾನ್ ಅವರ ನಿಧನದ ಸುದ್ದಿಯನ್ನು ಅವರ ಕೆಲಸಗಳನ್ನು ನಿಭಾಯಿಸುವ ಏಜನ್ಸಿಯಾಗಿರುವ 935 ಎಂಟರ್‍ಟೈನ್ಮೆಂಟ್ ದೃಢಪಡಿಸಿದೆ.
ಕೊರಿಯಾದ ಸಂಗೀತ ಸ್ಪರ್ಧೆ ಪ್ರೊಡ್ಯೂಸ್ 101 ಇದರ ಮಾಜಿ ಸ್ಪರ್ಧಿಯಾಗಿದ್ದ ಲೀ ಜಿಹಾನ್ ಅವರು ಟುಡೇ ಡಾಸ್ ಎನದರ್ ನಮ್ ಹ್ಯುನ್ ಡೇ ಎಂಬ ಟೆಲಿವಿಷನ್ ಕಾರ್ಯಕ್ರಮದ ಮೂಲಕ ಕಿರು ತೆರೆಗೆ ಪಾದಾರ್ಪಣೆ ಮಾಡಿದ್ದರು. ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂಬ ಮಾಹಿತಿಯಿದೆ.
ಸಿಯೋಲ್‍ನ ಇಕ್ಕಟ್ಟಾದ ರಸ್ತೆಯಲ್ಲಿ ನಡೆದ ಹ್ಯಾಲೋವೀನ್ ಆಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 151 ಕ್ಕೂ ಹೆಚ್ಚು ಮಂದಿ ಮೃತಪಟ್ಟು 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಕೋವಿಡ್ ನಿರ್ಬಂಧಗಳ ಸಡಿಲಿಕೆಯ ನಂತರ ನಡೆದ ನಡೆದ ಮೊದಲ ಹ್ಯಾಲೋವೀನ್ ಪಾರ್ಟಿ ಇದಾಗಿತ್ತು.