×
Ad

ಅಫ್ಘಾನಿಸ್ತಾನ, ಪಾಕ್, ಬಾಂಗ್ಲಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವಂತೆ ಗುಜರಾತಿನ 2 ಜಿಲ್ಲೆಗಳಿಗೆ ಕೇಂದ್ರ ಸೂಚನೆ

Update: 2022-11-01 13:50 IST

ಹೊಸದಿಲ್ಲಿ: ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ  ಬಾಂಗ್ಲಾದೇಶದ ಹಿಂದೂ, ಸಿಖ್, ಪಾರ್ಸಿ, ಕ್ರಿಶ್ಚಿಯನ್, ಬೌದ್ಧ ಮತ್ತು ಜೈನ ಸಮುದಾಯದ ಸದಸ್ಯರಿಗೆ ಪೌರತ್ವ ಕಾಯ್ದೆ 1955 ರ ಅಡಿಯಲ್ಲಿ ಪೌರತ್ವ ಪ್ರಮಾಣಪತ್ರವನ್ನು ನೀಡುವಂತೆ ಕೇಂದ್ರ ಗೃಹ ಸಚಿವಾಲಯವು ಗುಜರಾತ್‌ನ ಮೆಹ್ಸಾನಾ ಮತ್ತು ಆನಂದ್ ಜಿಲ್ಲಾಧಿಕಾರಿಗಳಿಗೆ ಸೋಮವಾರ ತಿಳಿಸಿದೆ ಎಂದು  The Indian Express ವರದಿ ಮಾಡಿದೆ.

1955 ರ ಪೌರತ್ವ ಕಾಯ್ದೆಯ ಸೆಕ್ಷನ್ 5 (ನೋಂದಣಿ ಮೂಲಕ) ಮತ್ತು ಸೆಕ್ಷನ್ 6 ಅಡಿಯಲ್ಲಿ ಪೌರತ್ವಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ಸಕ್ರಮ ವಲಸಿಗರಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು The Hindu  ವರದಿ ಮಾಡಿದೆ.

2019 ರಲ್ಲಿ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯಿದೆಯು ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಬಂದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಆರು ಮುಸ್ಲಿಮೇತರ ಸಮುದಾಯಗಳಿಗೆ ಪೌರತ್ವವನ್ನು ನೀಡುತ್ತದೆ. ಆದಾಗ್ಯೂ, ಕಾನೂನಿನ ಅಡಿಯಲ್ಲಿ ನಿಯಮಗಳನ್ನು ಇನ್ನೂ ರೂಪಿಸಲಾಗಿಲ್ಲ.

ಮೂರು ದೇಶಗಳ ವಲಸಿಗರ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಮಾಡಬೇಕು ಎಂದು ಗೃಹ ಸಚಿವಾಲಯ ಸೋಮವಾರ ಅಧಿಕಾರಿಗಳಿಗೆ ಸೂಚಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಅರ್ಜಿಗಳ ಪರಿಶೀಲನೆಯನ್ನು ಜಿಲ್ಲಾಧಿಕಾರಿಗಳು ಮಾಡುತ್ತಾರೆ ಮತ್ತು ನಂತರ ಕೇಂದ್ರ ಏಜೆನ್ಸಿಗಳಿಗೆ ರವಾನಿಸುತ್ತಾರೆ.

ಆಗಸ್ಟ್‌ನಲ್ಲಿ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಅವರು 40 ಪಾಕಿಸ್ತಾನಿ ಹಿಂದೂಗಳಿಗೆ ಭಾರತೀಯ ಪೌರತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದರು ಎಂದು Times of India ವರದಿ ಮಾಡಿದೆ. 2016 ರಿಂದ, ಅಹಮದಾಬಾದ್‌ನಲ್ಲಿರುವ ಕಲೆಕ್ಟರ್ ಕಚೇರಿಯು ಪಾಕಿಸ್ತಾನದ ಹಿಂದೂಗಳಿಗೆ 1,032 ಪೌರತ್ವ ಪ್ರಮಾಣಪತ್ರಗಳನ್ನು ನೀಡಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

Similar News