ಇಂದು ನಾಡು-ನುಡಿ ಪರಂಪರೆಯನ್ನು ಸ್ಮರಿಸುವ ದಿನ: ಮಮತಾ ದೇವಿ
ಭಟ್ಕಳ,ನ.1: ಇಂದು ಕನ್ನಡ ನಾಡುನುಡಿ, ಪರಂಪರೆ, ಇತಿಹಾಸ, ಕಲೆ ಮತ್ತು ಸಂಸ್ಕೃತಿಯನ್ನು ಆಚರಿಸುವ ಹಾಗೂ ಸ್ಮರಿಸುವ ದಿನವಾಗಿದೆ ಎಂದು ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ಹೇಳಿದ್ದಾರೆ.
ಅವರು ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ತಾಲೂಕಿನಲ್ಲಿ ರಾಜ್ಯ ಸರ್ಕಾರದ ಕೋಟಿ ಕಂಠ ಗಾಯನದ ಜೊತೆಯಲ್ಲಿಯೂ ಅತ್ಯಂತ ಅದ್ಧೂರಿ ಹಾಗೂ ವೈಶಿಷ್ಟ್ಯತೆಯಿಂದ ಕನ್ನಡದ ಹಬ್ಬವನ್ನು ಆಚರಿಸಿದ್ದೇವೆ ಎಂದ ಅವರು, ಕನ್ನಡ ಎನ್ನುವುದು ಸಾಕಷ್ಟು ವರ್ಷ ಇತಿಹಾಸ ಹಾಗೂ ಸಾಹಿತ್ಯವುಳ್ಳ ಭಾಷೆಯಾಗಿದೆ. ಕನ್ನಡ ಭಾಷೆ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತರನ್ನು ನೀಡಿದೆ. ಕನ್ನಡ ಎಂಬುದೇ ಬಹಳಷ್ಟು ಸೊಗಸು. ನಮ್ಮ ಕನ್ನಡ ಭಾಷೆಯನ್ನು ದಿನ ನಿತ್ಯದ ವ್ಯವಹಾರ ಮತ್ತು ಆಡಳಿತದಲ್ಲಿ ಬಳಸುವುದರ ಜೊತೆಯಲ್ಲಿ ನಮ್ಮ ರಾಜ್ಯಕ್ಕೆ ಬಂದಿರುವ ಎಲ್ಲಾ ಇತರೆ ರಾಜ್ಯ, ರಾಷ್ಟ್ರದ ಹಾಗೂ ಅಂತರ್ರಾಷ್ಟ್ರೀಯ ಜನರಿಗೆ ಕನ್ನಡ ಭಾಷೆಯನ್ನು ಕಲಿಸುವ ಪ್ರತಿಜ್ಞೆ ತೊಡೋಣ ಎಂದರು.
ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಸುನೀಲ ನಾಯ್ಕ ಮಾತನಾಡಿ, ಕನ್ನಡ ಭಾಷೆಗೆ ಒಂದು ಇತಿಹಾಸವಿದೆ. ಇದನ್ನು ನಮ್ಮ ನಾಡಿನ ಎಲ್ಲಾ ಕನ್ನಡಿಗರು ತಿಳಿದುಕೊಳ್ಳಬೇಕಿದೆ. ಕರ್ನಾಟಕದಲ್ಲಿನ ಇತಿಹಾಸ, ವೈವಿಧ್ಯತೆ, ಪರಂಪರೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಾಗ ಇದರ ಬಗ್ಗೆ ಅರಿವು ಮೂಡುತ್ತದೆ ಮತ್ತು ಕನ್ನಡಕ್ಕೆ ಕೊಡುವ ಗೌರವ ಹೆಚ್ಚಿಸುತ್ತದೆ ಎಂದರು.
ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯ ಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿದರು. ಕನ್ನಡ ನಾಡು ನುಡಿ ಹಾಗೂ ವೈಶಿಷ್ಟ್ಯತೆ ಬಗ್ಗೆ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಉಪನ್ಯಾಸ ನೀಡಿದರು.
ಈ ವೇಳೆ ಕನ್ನಡದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಮಂತ ಬಿ, ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಪ್ರಭಾಕಾರ ಚಿಕ್ಕನ ಮನೆ, ಪುರಸಭೆ ಮುಖ್ಯಾಧಿಕಾರಿ ಸುರೇಶ, ಪುರಸಭೆ ಅಧ್ಯಕ್ಷ ಪರ್ವೇಝ್ ಕಾಸಿಂಜೀ, ಮುಂತಾದವರು ಉಪಸ್ಥಿತರಿದ್ದರು.