ಗುಜರಾತ್‌ ಸೇತುವೆ ದುರಂತ: ಪ್ರಧಾನಿ ಮೋದಿ ಭೇಟಿಗೂ ಮುನ್ನ ನಿರ್ವಹಣಾ ಕಂಪೆನಿಯ ನಾಮ ಫಲಕವನ್ನು ಮುಚ್ಚಿದ ಅಧಿಕಾರಿಗಳು

Update: 2022-11-01 13:56 GMT

ಮೊರ್ಬಿ : ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು 130 ಜನರ ಸಾವಿಗೆ ಕಾರಣವಾದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಮುನ್ನ, ಸೇತುವೆಯನ್ನು ʼನವೀಕರಿಸಿದʼ ಕಂಪನಿಯ ಹೆಸರು ಬಿಳಿ ಪ್ಲಾಸ್ಟಿಕ್ ಕವರಿನಿಂದ ಮುಚ್ಚಲಾಗಿದೆ.

ಸೇತುವೆ ನವೀಕರಣದ ಗುತ್ತಿಗೆಯನ್ನು ಒರೆವಾ ಗ್ರೂಪ್ ಸಂಸ್ಥೆಯು ಪಡೆದುಕೊಂಡಿದ್ದು, ನಂತರ ಅದನ್ನು ಸಣ್ಣ ಕಂಪೆನಿಯೊಂದಕ್ಕೆ ಹೊರ ಗುತ್ತಿಗೆ ನೀಡಿತ್ತು. ಸೇತುವೆ ಬಳಿಯಿದ್ದ ಒರೆವಾ ಹೆಸರನ್ನು ಪ್ರಧಾನಿ ಭೇಟಿ ಸಂದರ್ಭದಲ್ಲಿ ಮುಚ್ಚಲಾಗಿದೆ.

ಕುಸಿತದ ಎರಡು ದಿನಗಳ ನಂತರ ಪ್ರಧಾನಿ ಮೋದಿ ಭೇಟಿ ಮಾಡಿದ್ದು, ಈ ಭೇಟಿಗಾಗಿ ಸಾಕಷ್ಟು ತಯಾರಿಗಳನ್ನು ನಡೆಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರಾತ್ರಿಯಿಡೀ ತರಾತುರಿಯಲ್ಲಿ ಪುನಃ ಬಣ್ಣ ಬಳಿಯಲಾಗಿದ್ದು, ಹೊಸ ಹಾಸಿಗೆಗಳು ಮತ್ತು ಶೀಟ್‌ಗಳನ್ನು ಹೊಂದಿರುವ ವಾರ್ಡ್ ಅನ್ನು ಸ್ಥಾಪಿಸಲಾಗಿದೆ. ಆಸ್ಪತ್ರೆಯನ್ನು ಪ್ರಧಾನಿ ಮೋದಿಗಾಗಿ ಸಜ್ಜುಗೊಳಿಸುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿ ವಿವಾದಕ್ಕೆ ಕಾರಣವಾಗಿದೆ.

ಚುನಾವಣಾ ಹೊಸ್ತಿನಲ್ಲಿರುವ ಗುಜರಾತಿನಲ್ಲಿ ಈ ದುರಂತವು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಸೇತುವೆಯೊಂದು ಕುಸಿದಿದ್ದಾಗ ಅದನ್ನು ಮಮತಾ ಬ್ಯಾನರ್ಜಿ ಪಕ್ಷದ ವಿರುದ್ಧದ ದಾಳಿಗೆ ಬಳಸಿಕೊಂಡಿದ್ದ ಪ್ರಧಾನಿ ಮೋದಿಯ ಹಳೆ ಭಾಷಣದ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ನವೀಕರಣಕ್ಕೆ ಇನ್ನೂ ಸಮಯ ಇದ್ದರೂ, ತೂಗು ಸೇತುವೆಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೇಗೆ ತೆರೆಯಲಾಯಿತು ಎಂದು ಎಎಪಿ ಮತ್ತು ಕಾಂಗ್ರೆಸ್‌ ಗುಜರಾತ್‌ ಸರ್ಕಾರವನ್ನು ಪ್ರಶ್ನಿಸಿದೆ. ಅದಾಗ್ಯೂ, ಗುಜರಾತ್‌ ಸರ್ಕಾರ ಸೇತುವೆ ದುರಂತದ ಹೊಣೆಯನ್ನು ತಾನು ಹೊತ್ತುಕೊಂಡಿದೆ.

ಒರೆವಾ ಕಂಪೆನಿ ವಿರುದ್ಧ ಸುರಕ್ಷತಾ ಉಲ್ಲಂಘನೆಗಳ ಆರೋಪ ಹೊರಿಸಿದ್ದು, ಇದುವರೆಗೂ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಅದರ ಯಾವೊಬ್ಬ ಉನ್ನತ ಮುಖ್ಯಸ್ಥರನ್ನು ಬಂಧಿಸಿಲ್ಲ ಎಂದು ndtv.com ವರದಿ ಮಾಡಿದೆ.

Similar News