ಸೇತುವೆ ದುರಂತ: ಪ್ರಧಾನಿ ಮೋದಿ ಭೇಟಿ ಮಾಡಲಿದ್ದ ಆಸ್ಪತ್ರೆಗೆ ನೀರಿನ ಸಂಪರ್ಕವೇ ಇಲ್ಲದ ವಾಟರ್‌ ಕೂಲರ್‌ ಅಳವಡಿಕೆ

Ndtv.com ವರದಿ

Update: 2022-11-01 15:59 GMT

ಅಹಮದಾಬಾದ್:‌ ಸೇತುವೆ ದುರಂತದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಯನ್ನು ರಾತ್ರೋರಾತ್ರಿ ನವೀಕರಣಗೊಳಿಸಿದ್ದು, ಹೊಸದಾಗಿ ನಾಲ್ಕು ನೀರಿನ ಕೂಲರ್‌ ಅನ್ನು ಅಳವಡಿಸಲಾಗಿದೆ ಎಂದು ndtv.com ವರದಿ ಮಾಡಿದೆ. ಆದರೆ, ಆ ನಾಲ್ಕು ನೀರಿನ ಕೂಲರ್‌ಗಳಲ್ಲಿ ಒಂದರಲ್ಲೂ ನೀರು ಬರುತ್ತಿರಲಿಲ್ಲ, ಅದಕ್ಕೆ ನೀರು ಸರಬರಾಜಿಗೆ ಸಂಪರ್ಕವನ್ನೇ ನೀಡಿಲ್ಲ ಎಂದು ವರದಿ ಹೇಳಿದೆ.

 ಎನ್‌ಡಿಟಿವಿಯಲ್ಲಿ ವರದಿ ಪ್ರಕಟಗೊಂಡ ಬಳಿಕ ಆಸ್ಪತ್ರೆ ಅಧಿಕಾರಿಗಳು ನೀರಿನ ಸಂಪರ್ಕವನ್ನು ನೀಡಿದ್ದಾರೆ ಎಂದು ಎನ್‌ಡಿಟಿವಿ ಹೇಳಿದೆ.

 ಪ್ರಧಾನಿ ಮೋದಿ ಭೇಟಿಗಾಗಿ ಆಸ್ಪತ್ರೆಯನ್ನು ತರಾತುರಿಯಲ್ಲಿ ಶೃಂಗರಿಸಲಾಗಿದ್ದು, ಕನಿಷ್ಟ 40 ಕ್ಕೂ ಅಧಿಕ ಕಾರ್ಮಿಕರು ಆಸ್ಪತ್ರೆಯನ್ನು ನವೀಕರಣಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ. ಆಸ್ಪತ್ರೆಯ ವಾರ್ಡುಗಳನ್ನು ರಾತ್ರೋರಾತ್ರಿ ಸ್ವಚ್ಛಗೊಳಿಸಿದ್ದು, ಹೊಸ ಹಾಸಿಗೆಗಳನ್ನು ಹಾಕಲಾಯಿತು. ಕೆಲವು ಹೊಸ ಹೊದಿಕೆಗಳು ಮೊರ್ಬಿಯಿಂದ 160 ಕಿಮೀ ದೂರದಲ್ಲಿರುವ ಜಾಮ್‌ನಗರದ ಆಸ್ಪತ್ರೆಯ ಲಾಂಛನಗಳನ್ನು ಹೊಂದಿದ್ದು, ಪ್ರಧಾನಿ ಮೋದಿ ಭೇಟಿಗೆಂದು ಅಲ್ಲಿಂದ ಹೊದಿಕೆ ಹಾಗೂ ಹಾಸಿಗೆಗಳನ್ನು ತರಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಪ್ರತಿ ಹಾಸಿಗೆಯ ಪಕ್ಕದಲ್ಲಿ ರಾತ್ರೋ ರಾತ್ರಿ ಹೊಸ IV ಡ್ರಿಪ್ ಸ್ಟ್ಯಾಂಡ್‌ಗಳು ಕಾಣಿಸಿಕೊಂಡಿವೆ ಎಂದು ಗ್ರೌಂಡ್ ರಿಪೋರ್ಟಿಂಗ್ ಬಹಿರಂಗಪಡಿಸಿದೆ. ಮೂಲತಃ ಇಲ್ಲಿಗೆ ಕರೆತಂದ ಎಂಟು ರೋಗಿಗಳ ಪೈಕಿ ಇಬ್ಬರನ್ನು ಪ್ರಧಾನಿ ಬರುವ ಮುನ್ನವೇ ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು ಎಂದು ವರದಿಯಾಗಿದೆ.

     

Similar News