ಗುಜರಾತ್ ತೂಗುಸೇತುವೆ ದುರಂತ: ನವೀಕರಣ ಹೆಸರಲ್ಲಿ ಕಂಪನಿ ಮಾಡಿದ್ದೇನು ಗೊತ್ತೇ‌ ?

Update: 2022-11-02 01:49 GMT

ಗಾಂಧಿನಗರ: ಮೊರ್ಬಿ ತೂಗುಸೇತುವೆ ದುರಂತದ ಬಗ್ಗೆ ನಡೆಯುತ್ತಿರುವ ತನಿಖೆ ವೇಳೆ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ನವೀಕರಣದ ಹೆಸರಿನಲ್ಲಿ ಗುತ್ತಿಗೆ ಪಡೆದ ಕಂಪನಿ ಹಳೆಯ ಕಬ್ಬಣದ ತಂತಿಗಳನ್ನು ಪಾಲಿಶ್ ಮಾಡಿ ಬಣ್ಣ ಬಳಿದದ್ದು ಮಾತ್ರ ಎಂಬ ಸಂಗತಿ ಬಹಿರಂಗವಾಗಿದೆ ಎಂದು timesofindia.com ವರದಿ ಮಾಡಿದೆ.

ಬ್ರಿಟಿಷ್ ಯುಗದ 143 ವರ್ಷ ಹಳೆಯ ಸೇತವೆಯ ತೂಕ ಗಣನೀಯವಾಗಿ ಹೆಚ್ಚುವ ಸಾಧನಗಳನ್ನು ಬಳಸಿರುವುದು ಮಾತ್ರವಲ್ಲದೇ ತುರ್ತು ಪರಿಹಾರ ಮತ್ತು ಸ್ಥಳಾಂತರ ಯೋಜನೆಯೂ ಇರಲಿಲ್ಲ ಎನ್ನುವುದು ಕೂಡಾ ತಿಳಿದು ಬಂದಿದೆ. ತಾಂತ್ರಿಕ ದೋಷಗಳ ಜತೆಗೆ ನವೀಕರಣ ಗುತ್ತಿಗೆ ಪಡೆದ ಸೇತುವೆಯ ಕಾಮಗಾರಿ ಗುಣಮಟ್ಟದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

"ಗುತ್ತಿಗೆದಾರರು ಬಹುಶಃ ಅಕ್ಟೋಬರ್ 26ರಂದು ಉದ್ಘಾಟನೆಗೆ ಮುನ್ನ ಎಲ್ಲ ಕೇಬಲ್‍ಗಳನ್ನು ಪಾಲಿಶ್ ಮಾಡಿ ಬಣ್ಣ ಮಾತ್ರ ಬಳಿದಿದ್ದಾರೆ. ಕೇಬಲ್ ಬದಲಾಯಿಸಲಾಗಿದೆ ಎನ್ನುವುದನ್ನು ಖಚಿತಪಡಿಸುವ ಯಾವ ಅಂಶವೂ ಕಂಡುಬಂದಿಲ್ಲ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಆಯಾಮದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸೇತುವೆ ನವೀಕರಣ ಕಾಮಗಾರಿ ಮುಗಿಸಲು ಡಿಸೆಂಬರ್‌ ವರೆಗೂ ಕಾಲಾವಕಾಶ ನೀಡಲಾಗಿತ್ತು. ಆದರೆ ದೀಪಾವಳಿಯ ಸಂದರ್ಭದಲ್ಲೇ ಅವಧಿಪೂರ್ವವಾಗಿ ಸಾರ್ವಜನಿಕರಿಗೆ ತೆರೆಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News