ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆಗೆ ವಿಫಲ ಯತ್ನ

ವಝೀರಾಬಾದ್ ರ್ಯಾಲಿಯಲ್ಲಿ ಗುಂಡಿನ ದಾಳಿ

Update: 2022-11-03 16:08 GMT

ಹೊಸದಿಲ್ಲಿ,ನ.3:  ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಗುರುವಾರ ಸಂಜೆ ನಡೆದ ರ್ಯಾಲಿಯೊಂದರಲ್ಲಿ  ದುಷ್ಕರ್ಮಿಗಳ ಗುಂಡಿನ ದಾಳಿಗೆ  ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್   ಅವರು ಗಾಯಗೊಂಡಿದ್ದಾರೆ.

ವಜೀರಾಬಾದ್ನಲ್ಲಿ ನಡೆದ ಪಾಕ್ ತೆಹ್ರಿಕೆ ಇನ್ಸಾಫ್ (ಪಿಟಿಐ)ಪಕ್ಷದ ರ್ಯಾಲಿಯಲ್ಲಿ ಇಮ್ರಾನ್ ಖಾನ್ ಅವರಿದ್ದ ಕಂಟೈನರ್ ಟ್ರಕ್ ಮೇಲೆ ಅಜ್ಞಾತ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದು,  ಅವರ ಕಾಲಿಗೆ ಗಾಯವಾಗಿದೆ. ಘಟನೆಯಲ್ಲಿ  ಪಿಟಿಐ ಪಕ್ಷದ ನಾಯಕರಾದ  ಫೈಸಲ್ ಜಾವೆದ್ ಹಾಗೂ ಅಹ್ಮದ್ ಛಟ್ಟಾ ಎಂಬವರಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

ಸಾರ್ವತ್ರಿಕ ಚುನಾವಣೆಗಳನ್ನು ತ್ವರಿತವಾಗಿ ನಡೆಸಬೇಕೆಂದು ಪಾಕ್ ಸರಕಾರವನ್ನು ಆಗ್ರಹಿಸಿ ಇಮ್ರಾನ್ಖಾನ್ ನೇತೃತ್ವದ ಪಾಕ್ ತೆಹ್ರಿಕೆ ಇನ್ಸಾಫ್ ಪಕ್ಷವು  ಲಾಹೋರ್ನಿಂದ ಇಸ್ಲಾಮಾಬಾದ್ವರೆಗೆ ಬೃಹತ್ ರ್ಯಾಲಿಯನ್ನು  ಹಮ್ಮಿಕೊಂಡಿದೆ. ಕಳೆದ ಶುಕ್ರವಾರ ಆರಂಭಗೊಂಡ ರ್ಯಾಲಿಯು ಗುರುವಾರ ವಝೀರಾಬಾದ್ ತಲುಪಿತ್ತು.

ಗುಂಡೇಟಿನಿಂದಾಗಿ 70ವರ್ಷದ ಇಮ್ರಾನ್ ಅವರ ಬಲಗಾಲಿಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ. ಘಟನೆಯ ಬಳಿಕ ಇಮ್ರಾನ್ ಅವರನ್ನು ಕಂಟೈನರ್ ಟ್ರಕ್ನಿಂದ ಇನ್ನೊಂದು ವಾಹನಕ್ಕೆ ವರ್ಗಾಯಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಅಲ್ಲಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಇಮ್ರಾನ್ ಖಾನ್ ಅವರು ಸುರಕ್ಷಿತವಾಗಿದ್ದಾರೆಂದು  ರ್ಯಾಲಿಯಲ್ಲಿ ಘೋಷಿಸಲಾಯಿತು. ಘಟನೆಯಲ್ಲಿ ಇಮ್ರಾನ್ ಖಾನ್ ಅವರ ಬೆಂಬಲಿಗನೊಬ್ಬ ಗುಂಡೇಟಿಂದ ಮೃತಪಟ್ಟಿರುವುದಾಗಿ ಕೆಲವು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಗುಂಡಿನ ದಾಳಿಯಲ್ಲಿ  ತೆಹ್ರೀಕೆ ಇನ್ಸಾಫ್ ಪಕ್ಷದ ಪದಾಧಿಕಾರಿ ಅಸಾದ್ ಉಮರ್ ಅವರ  ಕಾಲಿಗೂ ಗಾಯವಾಗಿದೆ.  ಬಂದೂಕುಧಾರಿಯನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು ಆತನ ಗುರುತು ಇನ್ನೂ ಪತ್ತೆಯಾಗಿಲ್ಲವೆಂದು ತಿಳಿದುಬಂದಿದೆ.ಈವರೆಗೆ ಈ ಗುಂಡಿನ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ.

‘‘ ಇಮ್ರಾನ್ ಖಾನ್ರ ಬಲಗಾಲಿಗೆ ಗಾವಾಗಿದ್ದು,  ಅವರನ್ನು  ಲಾಹೋರ್ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ. ಆದರೆ ಅವರಿಗೆ ಗಂಭೀರವಾದ ಗಾಯವಾಗಿಲ್ಲವೆಂದು  ಇಮ್ರಾನ್ ಅವರ ನಿಕಟವರ್ತಿ ರವೂಫ್ ಹಸ್ಸನ್ ತಿಳಿಸಿದ್ದಾರೆ. ಇದು ಇಮ್ರಾನ್ ಖಾನ್ ಅವರನ್ನು ಹತ್ಯೆಗೈಯುವ  ಪ್ರಯತ್ನವಾಗಿದೆಯೆಂದು ರವೂಫ್ ಹಸನ್ ಆರೋಪಿಸಿದ್ದಾರೆ.

 ಈ ನಡುವೆ ಇಮ್ರಾನ್ ಖಾನ್ ರ್ಯಾಲಿಯಲ್ಲಿ ನಡೆದ ಗುಂಡೆಸೆತದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಪಾಕ್ ಸರಕಾರ ಆದೇಶ ನೀಡಿದೆ.

ಲಾಹೋರ್ನಿಂದ ಇಸ್ಲಾಮಾಬಾದ್ವರೆಗಿನ ತನ್ನ ದೀರ್ಘರ್ಯಾಲಿಯಲ್ಲಿ ಪ್ರತಿ ದಿನವೂ ಇಮಾರನ್ ಖಾನ್ ಅವರು ಟ್ರಕ್ನಲ್ಲಿ ಜೋಡಿಸಲಾದ ಶಿಪ್ಪಿಂಗ್ ಕಂಟೈನರ್ನಲ್ಲಿ ನಿಂತು ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದರು.

ಪಾಕ್ ನ ವಿವಿಧೆಡೆ ಪ್ರತಿಭಟನೆ

ವಝೀರಾಬಾದ್ನಲ್ಲಿ  ಇಮ್ರಾನ್ ಖಾನ್ ಅವರ ಮೇಲೆ ಗುಂಡಿನ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ವಿವಿಧೆಡೆ ಪ್ರತಿಭಟನೆಗಳು ಭುಗಿಲೆದ್ದಿರುವುದಾಗಿ ವರದಿಯಾಗಿದೆ. ಕ್ವೆಟ್ಟಾ ನಗರದಲ್ಲಿ ಪ್ರತಿಭಟನಕಾರರು ವಿಮಾನನಿಲ್ದಾಣ ರಸ್ತೆಯಲ್ಲಿ ಧರಣಿ ನಡೆಸಿದ  ಪರಿಣಾಮವಾಗಿ ಆಸುಪಾಸಿನ ಪ್ರದೇಶಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು. ಶರಾಯೆ ಫೈಸಲ್, ಉತ್ತರ ನಝೀಮಾಬಾದ್, ಲಾಂಧಿ, ಕ್ವೆದಾಬಾದ್, ಉತ್ತರ ಕರಾಚಿ, ಹಬ್ ನದಿ ರಸ್ತೆ ಹಾಗೂ ಮೌರಿಪುರ್ ನಗರಗಳಲ್ಲಿಯೂ ಪ್ರತಿಭಟನೆಗಳು ನಡೆದಿರುವುದಾಗಿ ವರದಿಯಾಗಿವೆ.

Similar News