ಶಾಲೆಯನ್ನು ತೊರೆದ ಚಿಕ್ಕಮಕ್ಕಳ ಸಂಖ್ಯೆ ಒಂದೇ ವರ್ಷದಲ್ಲಿ ದುಪ್ಪಟ್ಟು: ವರದಿ

Update: 2022-11-03 12:55 GMT

ಹೊಸದಿಲ್ಲಿ: ಶಾಲೆಯನ್ನು ತೊರೆಯುತ್ತಿರುವ 1ರಿಂದ 8ನೇ ತರಗತಿಯ ಮಕ್ಕಳ ಸಂಖ್ಯೆ ಒಂದೇ ವರ್ಷದಲ್ಲಿ ದುಪ್ಪಟ್ಟಾಗಿರುವುದನ್ನು ಶಿಕ್ಷಣ ಸಚಿವಾಲಯವು (Ministry of Education) ಬಿಡುಗಡೆಗೊಳಿಸಿದ ಅಂಕಿಅಂಶಗಳು ಬಹಿರಂಗಗೊಳಿಸಿವೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧಕ್ಕೆ ಶಾಲೆಯನ್ನು ತೊರೆದ ಚಿಕ್ಕಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು theprint.in ವರದಿ ಮಾಡಿದೆ.

ಆದಾಗ್ಯೂ, ಶಾಲೆಯನ್ನು ತೊರೆಯುತ್ತಿರುವ ದೊಡ್ಡಮಕ್ಕಳ ಸಂಖ್ಯೆ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿರುವುದನ್ನು ಈ ಅಂಕಿಅಂಶಗಳು ತೋರಿಸಿವೆ.
ಗುರುವಾರ ಬಿಡುಗಡೆಗೊಂಡ ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಷನ್ ಸಿಸ್ಟಮ್ ಫಾರ್ ಎಜ್ಯುಕೇಶನ್ (ಯುಡಿಐಎಸ್‌ಇ) ಪ್ಲಸ್ 2021-22 ವರದಿಯು ಈ ದತ್ತಾಂಶಗಳನ್ನು ಮುಂದಿರಿಸಿದೆ.

ಅಂಕಿಅಂಶಗಳಂತೆ 2020-21ರಲ್ಲಿ ಶೇ.0.8ರಷ್ಟಿದ್ದ ಪ್ರಾಥಮಿಕ ಮಟ್ಟದಲ್ಲಿ (1ರಿಂದ 5ನೇ ತರಗತಿ) ಶಾಲೆಯನ್ನು ತೊರೆದವರ ಪ್ರಮಾಣ 2021-22ರಲ್ಲಿ ಶೇ.1.5ಕ್ಕೆ ಏರಿಕೆಯಾಗಿದೆ. ಉನ್ನತ ಪ್ರಾಥಮಿಕ ಮಟ್ಟದಲ್ಲಿ ಈ ಪ್ರಮಾಣ 2020-21ರಲ್ಲಿ ಇದ್ದ ಶೇ.1.9ರಿಂದ 2021-22ರಲ್ಲಿ ಶೇ.3ಕ್ಕೆ ಏರಿಕೆಯಾಗಿದೆ.

ವಾಸ್ತವದಲ್ಲಿ ಉನ್ನತ ಪ್ರಾಥಮಿಕ ಮಟ್ಟದಲ್ಲಿ ಶಾಲೆಯನ್ನು ತೊರೆದವರ ಪ್ರಮಾಣ ಮೂರು ವರ್ಷಗಳಲ್ಲಿ ಗರಿಷ್ಠವಾಗಿದೆ. 2019-20ರಲ್ಲಿ ಶೇ.2.6ರಷ್ಟಿದ್ದ ಈ ಪ್ರಮಾಣ 2020-21ರಲ್ಲಿ ಶೇ.1.9ಕ್ಕೆ ಇಳಿಕೆಯಾಗಿತ್ತು,ಆದರೆ 2021-22ರಲ್ಲಿ ಮತ್ತೆ ಶೇ.3ಕ್ಕೆ ಏರಿಕೆಯಾಗಿದೆ. ಈ ಎಲ್ಲ ಮೂರೂ ವರ್ಷಗಳಲ್ಲಿ ಉನ್ನತ ಪ್ರಾಥಮಿಕ ಮಟ್ಟದಲ್ಲಿ ಶಾಲೆಯನ್ನು ತೊರೆದ ಬಾಲಕಿಯರ ಸಂಖ್ಯೆ ಬಾಲಕರಿಗಿಂತ ಹೆಚ್ಚಿದೆ.

ಆದಾಗ್ಯೂ ಪ್ರೌಢ ಶಿಕ್ಷಣ ಮಟ್ಟದಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇ.14.6ರಷ್ಟಿದ್ದ ಶಾಲೆಯನ್ನು ತೊರೆಯುವವರ ಪ್ರಮಾಣ ಶೇ.12.6ಕ್ಕೆ ಇಳಿಕೆಯಾಗಿದೆ ಎಂದು ವರದಿಯು ತೋರಿಸಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸರಕಾರಿ ಮತ್ತು ಖಾಸಗಿ ಶಾಲೆಗಳು ಸೇರಿದಂತೆ 19.63 ಲಕ್ಷ ಹೊಸ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. 2020-21ರಲ್ಲಿ 25.38 ಕೋ. ಇದ್ದ ವಿದ್ಯಾರ್ಥಿಗಳ ಸಂಖ್ಯೆ 2021-22ರಲ್ಲಿ 25.57 ಕೋ.ಗೇರಿದೆ. 8.19 ಲಕ್ಷಕ್ಕೂ ಅಧಿಕ ಬಾಲಕಿಯರು ಹೊಸದಾಗಿ ಶಾಲೆಗಳಿಗೆ ಸೇರ್ಪಡೆಗೊಂಡಿದ್ದಾರೆ ಎಂದೂ ವರದಿಯು ತಿಳಿಸಿದೆ. ಶಾಲೆಗಳಲ್ಲಿ ಬಾಲಕಿಯರ ಸಂಖ್ಯೆ ಈಗ ಅವರ ವಯೋಮಾನ ಗುಂಪಿನ ಜನಸಂಖ್ಯೆಗೆ ಅನುಗುಣವಾಗಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಹಲವು ಹೊಸ ಫೀಚರ್ಸ್‌ ಬಿಡುಗಡೆಗೊಳಿಸಿದ ವಾಟ್ಸ್ ಆ್ಯಪ್‌

Similar News