ಮಕ್ಕಳಲ್ಲಿನ ಮಾನಸಿಕ ಸಮಸ್ಯೆಗಳಿಗೆ ಧ್ಯಾನ ಪರಿಹಾರ ಅಲ್ಲ: ಡಾ. ಭಂಡಾರಿ
ಉಡುಪಿ, ನ.4: ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವ ಹಾಗೂ ಮೊಬೈಲ್ ಚಟದ ಸಮಸ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ 10 ನಿಮಿಷಗಳ ಧ್ಯಾನ ಮಾಡಿಸುವಂತೆ ಶಿಕ್ಷಣ ಸಚಿವರು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಿರುವ ಟಿಪ್ಪಣಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಉಡುಪಿಯ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ, ಸರಕಾರ ಯಾವುದೇ ಕಾರ್ಯಕ್ರಮ ಮಾಡುವಾಗ ಅದಕ್ಕೆ ವೈಜ್ಞಾನಿಕ ನೆಲೆ ಎಂಬುದು ಬಹಳ ಮುಖ್ಯ. ವೈಜ್ಞಾನಿಕ ಚಿಂತನೆ ಇಲ್ಲದೆ ಸಮ್ಮನೆ ಈ ರೀತಿ ಸೂಚನೆ ನೀಡಿರುವುದು ಸರಿಯಲ್ಲ ಎಂದರು.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಮೊಬೈಲ್ ಚಟ ಹೆಚ್ಚಾಗಲು ಮತ್ತು ಏಕಾಗ್ರತೆ ಕಡಿಮೆಯಾಗಲು ಆನ್‌ಲೈನ್ ಶಿಕ್ಷಣವೇ ಮುಖ್ಯ ಕಾರಣ. ಆಗ ನಡೆಸಿದ ಆನ್‌ಲೈನ್‌ಗಳ ಅಡ್ಡ ಪರಿಣಾಮವಾಗಿ ಮಕ್ಕಳು ಮೊಬೈಲ್ ಚಟಕ್ಕೆ ಬಲಿಯಾಗಿದ್ದಾರೆ. ಇದರಲ್ಲಿ ಕೆಲವು ಭಾವನಾತ್ಮಾಕ ಹಾಗೂ ಮನಸ್ಸಿಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಇವೆ. ಅದಕ್ಕೆ ಪರಿಹಾರ ಕೇವಲ 10 ನಿಮಿಷಗಳ ಧ್ಯಾನ ಅಲ್ಲ ಎಂದು ಅವರು ಹೇಳಿದರು.
ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ಶಾಲೆಗಳಲ್ಲಿ ಸಮಾಲೋಚಕರನ್ನು ನೇಮಕ ಮಾಡಬೇಕು. ಮಕ್ಕಳ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಬೇಕು ಮತ್ತು ಈ ಬಗ್ಗೆ ಶಿಕ್ಷಕರಿಗೂ ಅರಿವು ಮೂಡಿಸಬೇಕು. ಸಮುದಾಯದಲ್ಲಿಯೇ ಇದರ ಬಗ್ಗೆ ಚರ್ಚೆಗಳು ನಡೆಯಬೇಕು. ಇದನ್ನು ಬಿಟ್ಟು ಕೇವಲ 10 ನಿಮಿಷ ಧ್ಯಾನ ಮಾಡಿ ಪರಿಹಾರ ತರುತ್ತೇವೆ ಎಂಬುದು ತಪ್ಪು. ಸರಕಾರ ಎಲ್ಲದಕ್ಕೂ ಕ್ವಿಕ್‌ಪಿಕ್ಸ್ ಐಡಿಯಾಸ್ ಹುಡುತ್ತಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಮಕ್ಕಳಿಗೆ ಒಳ್ಳೆಯದಾಗುವ ಯಾವುದೇ ಕಾರ್ಯಕ್ರಮವನ್ನು ಕೂಡ ಸರಕಾರ ಜಾರಿಗೆ ತರಲಿ. ಆದರೆ ಅದರಲ್ಲಿ ವೈಜ್ಞಾನಿಕ ನೆಲೆ ಇರುವುದು ಬಹಳ ಮುಖ್ಯ. ಇಂತಹ ಧ್ಯಾನದಿಂದ ಪ್ರಯೋಜನ ಇದೆಯೇ ಎಂಬುದನ್ನು ಸರಕಾರ ತಜ್ಞರಿಂದ ಅಭಿಪ್ರಾಯ ಪಡೆದುಕೊಳ್ಳಲಿ. ಇಂದು ಈ ಕುರಿತು ಎಲ್ಲ ಕಡೆಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಎಲ್ಲ ಶಾಲೆಗಳಲ್ಲಿಯೂ ಆಪ್ತ ಸಮಾಲೋಚಕರು ಇರಬೇಕೆಂಬ ನಿಯಮ ಇದೆ. ಆದರೆ ಎಲ್ಲೂ ಈ ನಿಯಮ ಪಾಲನೆ ಆಗುತ್ತಿಲ್ಲ. ಶಿಕ್ಷಕರಿಗೆ ಮಾನಸಿಕ ಆರೋಗ್ಯದ ಕುರಿತು ತರಬೇತಿ ಕೂಡ ಸರಕಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.