ಉಡುಪಿ ಜಿಲ್ಲಾ ವಿಶೇಷ ಮಕ್ಕಳ ಕ್ರೀಡೋತ್ಸವ ಉದ್ಘಾಟನೆ

Update: 2022-11-04 14:19 GMT

ಶಿರ್ವ: ವಿಶೇಷ ಮಕ್ಕಳಿಗೋಸ್ಕರವಾಗಿ ಆಯೋಜಿಸಿದ ಕ್ರೀಡೋತ್ಸವ ಅತ್ಯಂತ ಮಹತ್ವದ್ದಾಗಿದ್ದು, ಮಕ್ಕಳ ಕ್ರೀಡಾ ಕೌಶಲ್ಯ, ಸುಪತಿ ಪ್ರತಿಭೆಗಳ ವಿಕಸನಕ್ಕೆ ಪ್ರೇರಣೆ ನೀಡುತತಿದೆ. ವಿಶೇಷ ಮಕ್ಕಳ ಕ್ರೀಡಾ ಸಾಧನೆಯ ಅನಾವರಣದಲ್ಲಿ ಶಿಕ್ಷಕರ ಶ್ರಮ ಮಹತ್ವದ್ಧಗಿದ್ದು, ಶ್ಲಾಘನೀಯವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.

ಬಂಟಕಲ್ಲು ಸಮೀಪದ ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ರಜತ ಮಹೋತ್ಸವ  ವರ್ಷಾಚರಣೆ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವುಗಳ ಸಹಭಾಗಿತ್ವದಲ್ಲಿ ಪಾಂಬೂರು ಮಾನಸ ಶಾಲಾ ಮೈದಾನದಲ್ಲಿ ಗುರುವಾರ ಆಯೋಜಿಸಲಾದ ಉಡುಪಿ ಜಿಲ್ಲಾ ವಿಶೇಷ ಮಕ್ಕಳ ಕ್ರೀಡೋತ್ಸವವನ್ನು ಉದ್ಘಾಟಿಸಿ, ಪಥ ಸಂಚಲನ ಮತ್ತು ಗೌರವ ವಂದನೆ ಸ್ವೀಕರಿಸಿ  ಅವರು ಮಾತನಾಡುತಿದ್ದರು.

ಮಾನಸ ಕೇಂದ್ರದ ಪೋಷಕ, ನಿವೃತ್ತ ನೌಕಾಧಿಕಾರಿ ಕೋಮೊಡೋರ್ ಜೆರೋಮ್ ಕೆಸ್ತಲಿನೊ ಕ್ರೀಡಾ ಜ್ಯೋತಿ ಬೆಳಗಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರತ್ನಾ ಮುಖ್ಯ ಅತಿಥಿಗಳಾಗಿದ್ದರು.

ಟ್ರಸ್ಟಿಗಳಾದ ಡಾ.ಎಡ್ವರ್ಡ್ ಲೋಬೊ, ಡಾ.ಜೆರಾಲ್ಡ್ ಪಿಂಟೊ, ಕಿರಣ್ ಕ್ರಾಸ್ತ, ರೆಮಿಡಿಯಾ ಡಿಸೋಜ, ಜೋನ್ ಮಾರ್ಟಿಸ್, ರವೀಂದ್ರ ಶೆಟ್ಟಿ,  ಕೆಥೊಲಿಕ್ ಸಭಾ ಅಧ್ಯಕ್ಷ ಎಲ್‌ರೊಯ್ ಕಿರಣ್ ಕ್ರಾಸ್ಟ, ಉಪಾಧ್ಯಕ್ಷೆ ಮೇರಿ ಡಿಸೋಜ, ವಲೇರಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಹೆನ್ರಿ ಮಿನೇಜಸ್ ಸ್ವಾಗತಿಸಿದರು. ಶಿಕ್ಷಕಿಯರಾದ ಪ್ರಮೀಳಾ ಹಾಗೂ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಸಿಸ್ಟರ್ ಅನ್ಸಿಲ್ಲಾ ಫೆರ್ನಾಂಡಿಸ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಡೋಮಿ ಯನ್ ಆರ್ ನೊರೋನ್ಹಾ ಶಂಕರಪುರ, ಜೋಸೆಫ್ ಡಿಸೋಜ ಮೂಡುಬೆಳ್ಳೆ, ಸುರೇಶ್ ದೇವಾಡಿಗ ಪಡುಬೆಳ್ಳೆ ಕ್ರೀಡಾಕೂಟದ ನಿರ್ಣಾಯಕರಾಗಿ ಕರ್ತವ್ಯ ನಿರ್ವಹಿಸಿದರು.

ವಿಜೇತಾ ಕಾರ್ಕಳ ಶಾಲೆಗೆ ಸಮಗ್ರ ಪ್ರಶಸ್ತಿ

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದ ಸಮಗ್ರ ಪ್ರಶಸ್ತಿ ವಿತರಿಸಲಾಯಿತು. ವಿಜೇತಾ ಕಾರ್ಕಳ ಸ್ಥಾನ ಹಾಗೂ ಆಶಾ ನಿಲಯ ಉಡುಪಿ ತಂಡ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು.

ಶಿರ್ವ ಗ್ರಾಪಂ ಅಧ್ಯಕ್ಷ ರತನ್ ಶೆಟ್ಟಿ, ಉಪಾಧ್ಯೆಕ್ಷೆ ಗ್ರೇಸಿ ಕರ್ಡೋಜ, ಶಿರ್ವ ರೋಟರಿ ಅಧ್ಯಕ್ಷ ಡಾ.ವಿಟ್ಠಲ್ ನಾಯಕ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ದರು. ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮಿನೇಜಸ್ ಧ್ವಜಾವರೋಹಣ ನೆರವೇರಿಸಿದರು. ಆಶ್ವಿನಿ ಪಾಂಬೂರು ಹಾಗೂ ರವೀಂದ್ರ ಎಸ್. ಬೈಂದೂರು ನಿರೂಪಿಸಿದರು. ಡಾ,ಜೆರಾಲ್ಡ್ ಪಿಂಟೊ ವಂದಿಸಿದರು. 

Similar News