ಇಸ್ರೇಲ್: ಸರಕಾರ ರಚನೆಗೆ ಮಾತುಕತೆ ಆರಂಭಿಸಿದ ನೆತನ್ಯಾಹು

Update: 2022-11-04 19:06 GMT

 ಜೆರುಸಲೇಂ, ನ.4:  ಬೆಂಜಮಿನ್ ನೆತನ್ಯಾಹು ಇಸ್ರೇಲ್‌ನ ಇತಿಹಾಸದಲ್ಲೇ ಅತ್ಯಂತ ಬಲಪಂಥೀಯ ಸರಕಾರ ರಚನೆ ಬಗ್ಗೆ ಸಂಪ್ರದಾಯವಾದಿ ಮತ್ತು ಬಲಪಂಥೀಯ ಮಿತ್ರಪಕ್ಷಗಳೊಂದಿಗೆ ಶುಕ್ರವಾರ ಮಾತುಕತೆ ಆರಂಭಿಸಿದ್ದಾರೆ.

 ಗುರುವಾರ ರಾತ್ರಿ ಘೋಷಿಸಲ್ಪಟ್ಟ ಅಧಿಕೃತ ಫಲಿತಾಂಶದಂತೆ, 120 ಸದಸ್ಯ ಬಲದ ಸಂಸತ್ತಿನಲ್ಲಿ ನೆತನ್ಯಾಹು ಅವರ ಲಿಕುಡ್ ಪಕ್ಷ 32 ಸ್ಥಾನ ಗಳಿಸಿದ್ದರೆ, ಮಿತ್ರಪಕ್ಷಗಳಾದ ಎರಡು ಸಂಪ್ರದಾಯವಾದಿ ಯೆಹೂದಿ ಪಕ್ಷಗಳು ಒಟ್ಟು 18 ಸ್ಥಾನ, ‘ರಿಲೀಜಿಯಸ್ ಝಿಯೋನಿಸಂ’ ಎಂಬ ಕಟ್ಟಾ ಬಲಪಂಥೀಯ ಪಕ್ಷ 14 ಸ್ಥಾನ ಗಳಿಸಿದ್ದು ಮೈತ್ರಿಕೂಟ ಒಟ್ಟು 64 ಸ್ಥಾನದೊಂದಿಗೆ ಸರಳ ಬಹುಮತ ಸಾಧಿಸಿದೆ.

ನಿರ್ಗಮಿತ ಪ್ರಧಾನಿ ಯಾಯಿರ್ ಲ್ಯಾಪಿಡ್ ಅವರ ನೇತೃತ್ವದ ಮೈತ್ರಿಕೂಟ 51 ಸ್ಥಾನ ಪಡೆದಿದೆ. ಈ ಮೂಲಕ ನೆತನ್ಯಾಹು ಮತ್ತೆ ಪ್ರಧಾನಿಯಾಗಿ ಇಸ್ರೇಲ್‌ಗೆ ಎದುರಾಗಿರುವ ಅನಿರೀಕ್ಷಿತ ರಾಜಕೀಯ ಬಿಕ್ಕಟ್ಟಿಗೆ ಅಂತ್ಯ ಹೇಳುವ ನಿರೀಕ್ಷೆಯಿದೆ. ಕಳೆದ ನಾಲ್ಕು ವರ್ಷದಲ್ಲಿ ಇಸ್ರೇಲ್ 5 ಚುನಾವಣೆಯನ್ನು ಕಂಡಿದೆ.

Similar News