ಈ ರಾಜ್ಯದಲ್ಲೂ 2023 ರಿಂದ ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್

Update: 2022-11-05 04:56 GMT

ಡೆಹ್ರಾಡೂನ್: ಮುಂದಿನ ಶೈಕ್ಷಣಿಕ ವರ್ಷದಿಂದ  ಉತ್ತರಾಖಂಡದಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಇಂಗ್ಲಿಷ್ ಜೊತೆಗೆ ಹಿಂದಿಯಲ್ಲೂ ಕಲಿಸಲಾಗುವುದು MBBS In Hindi  ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಧನ್ ಸಿಂಗ್ ರಾವುತ್ ಹೇಳಿದ್ದಾರೆ.

ಉತ್ತರಾಖಂಡ ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್   ಆರಂಭಿಸಿದರೆ ಮಧ್ಯಪ್ರದೇಶದ ನಂತರ ಈ ಹೆಜ್ಜೆ ಇಟ್ಟ  ಎರಡನೇ ರಾಜ್ಯ ಎನಿಸಿಕೊಳ್ಳಲಿದೆ. ಮಧ್ಯಪ್ರದೇಶ ಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಅಳವಡಿಸಿಕೊಂಡಿತ್ತು.

ಹಿಂದಿಗೆ ಕೇಂದ್ರವು ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾವತ್ ಶುಕ್ರವಾರ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ನಾಲ್ವರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ. ಪೌರಿ ಜಿಲ್ಲೆಯ ಶ್ರೀನಗರದ ಸರಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಎಂ.ಎಸ್.ರಾವತ್ ಅವರು ಸಮಿತಿಯ ನೇತೃತ್ವ ವಹಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಸಚಿವರ ಪ್ರಕಾರ, ಸಮಿತಿಯು ಮಧ್ಯಪ್ರದೇಶದ ಸರಕಾರಿ ಕಾಲೇಜುಗಳಲ್ಲಿ ಎಂಬಿಬಿಎಸ್ ಹಿಂದಿ ಪಠ್ಯಕ್ರಮವನ್ನು ಅಧ್ಯಯನ ಮಾಡಿದ ನಂತರ ಕಾಲೇಜುಗಳಿಗೆ ಹೊಸ ಪಠ್ಯಕ್ರಮದ ಕರಡನ್ನು ಸಿದ್ಧಪಡಿಸುತ್ತದೆ.

ಸಮಿತಿಯ ಕರಡನ್ನು ಸ್ವೀಕರಿಸಿ, ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭವಾಗುತ್ತದೆ ಎಂದು ಸಚಿವರು ಹೇಳಿದರು.

ಅಕ್ಟೋಬರ್ 16 ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುವ ಮಧ್ಯಪ್ರದೇಶ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೂರು ಹಿಂದಿ ವಿಷಯಗಳ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದ್ದರು.

Similar News