×
Ad

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ

Update: 2022-11-05 13:30 IST

ಶಿಮ್ಲಾ, ನ. 5:  ಹಿಮಾಚಲಪ್ರದೇಶ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿಮ್ಲಾ(Shimla)ದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್(Congress) ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಹಿಮಾಚಲ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು, ಪ್ರತಿ ಕ್ಷೇತ್ರಕ್ಕೆ 10 ಕೋ.ರೂ. ಸ್ಟಾರ್ಟ್ಅಪ್ ಫಂಡ್ ಬಿಡುಗಡೆ ಮಾಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿದೆ.

ಹಳೆಯ ಪಿಂಚಣಿ ಯೋಜನೆಯನ್ನು ಪುನರುಜ್ಜೀವನಗೊಳಿಸಲಾಗುವುದು, 5 ಲಕ್ಷ ಯುವ ಜನರಿಗೆ ಉದ್ಯೋಗ ಒದಗಿಸಲಾಗುವುದು, ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂ. ಭತ್ತೆ ನೀಡಲಾಗುವುದು, ಮೊಬೈಲ್ ಕ್ಲಿನಿಕ್ಗಳನ್ನು ನಡೆಸಲಾಗುವುದು ಹಾಗೂ ಸೆಗಣಿಯ ಕೇಕ್(Fenugreek cake) ಅನ್ನು ಪ್ರತಿ ಕಿ.ಗ್ರಾಂ.ಗೆ 2 ರೂ.ನಂತೆ ಖರೀದಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. 

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಧಾನಿ ರಾಮ್ ಸಂಧಿಲ್(Dhani Ram Sandhil), ಹಿಮಾಚಲ ಪ್ರದೇಶದಲ್ಲಿ ಮತದಾರರ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಲು ಆಡಳಿತಾರೂಡ ಬಿಜೆಪಿ ವಿಫಲವಾಗಿದೆ. 2017ರ ಚುನಾವಣೆ ಮುನ್ನ ಅದು ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದಿದ್ದಾರೆ.

‘‘ಇದು ಕೇವಲ ಚುನಾವಣಾ ಪ್ರಣಾಳಿಕೆ ಅಲ್ಲ. ಬದಲಾಗಿ, ಇದು ಹಿಮಾಚಲ ಪ್ರದೇಶದ ಜನರ ಅಭಿವೃದ್ಧಿಗೆ ಹಾಗೂ ಕಲ್ಯಾಣಕ್ಕೆ ಸಿದ್ಧಪಡಿಸಲಾದ ದಾಖಲೆ’’ ಎಂದು ಸಂಧಿಲ್ ಹೇಳಿದ್ದಾರೆ.

ಹಿಮಾಚಲಪ್ರದೇಶ ವಿಧಾನ ಸಭೆಯ 68 ಸ್ಥಾನಗಳಿಗೆ ನವೆಂಬರ್ 12ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಘೋಷಣೆಯಾಗಲಿದೆ. 

Similar News