ಮೈನ್‌ಪುರಿ ಲೋಕಸಭೆ, 5 ವಿಧಾನಸಭಾ ಸ್ಥಾನಗಳಿಗೆ ಡಿ. 5 ರಂದು ಉಪಚುನಾವಣೆ, ಡಿ. 8 ರಂದು ಫಲಿತಾಂಶ

Update: 2022-11-05 08:12 GMT

ಹೊಸದಿಲ್ಲಿ: ಹಲವು ರಾಜ್ಯಗಳ ಐದು ವಿಧಾನಸಭಾ ಸ್ಥಾನಗಳು ಹಾಗೂ  ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರಕ್ಕೆ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ವಿಧಾನಸಭೆ ಸ್ಥಾನಗಳು ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ, ಬಿಹಾರ ಹಾಗೂ ಛತ್ತೀಸ್‌ಗಢದಲ್ಲಿ ಹರಡಿಕೊಂಡಿವೆ.

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದಾಗಿ ಮೈನ್‌ಪುರಿ ಲೋಕಸಭಾ ಕ್ಷೇತ್ರ ತೆರವಾಗಿತ್ತು.

ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ 2019 ರಿಂದ ದ್ವೇಷ ಭಾಷಣ ಪ್ರಕರಣದಲ್ಲಿ ದೋಷಿತರಾಗಿ,  ಶಿಕ್ಷೆಗೆ ಗುರಿಯಾದ ನಂತರ ಅನರ್ಹಗೊಳಿಸಲ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಂಪುರ ವಿಧಾನಸಭಾ ಸ್ಥಾನವು ತೆರವಾಗಿತ್ತು.

ಇನ್ನೂ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಒಡಿಶಾದ ಪಡಂಪುರ, ರಾಜಸ್ಥಾನದ ಸರ್ದರ್ಶಹರ್, ಬಿಹಾರದ ಕುರ್ಹಾನಿ ಹಾಗೂ  ಛತ್ತೀಸ್‌ಗಢದ ಭಾನುಪ್ರತಾಪುರ್ ದಲ್ಲಿ ಡಿ.5ರಂದು  ಉಪಚುನಾವಣೆಯಲ್ಲಿ ಮತದಾನ ನಡೆಯಲಿದೆ.

ಎಲ್ಲಾ ಉಪಚುನಾವಣೆಯ ಮತ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.

ಡಿಸೆಂಬರ್ 8 ರಂದು ಗುಜರಾತ್ ಹಾಗೂ  ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಮತ ಎಣಿಕೆಯೂ ನಡೆಯಲಿದೆ.

Similar News