ಅಪ್ರಾಪ್ತ ವಯಸ್ಕ ಬಾಲಕಿಯ ಸಾಮೂಹಿಕ ಅತ್ಯಾಚಾರಕ್ಕಾಗಿ ಇಬ್ಬರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

"ನಾವು ದೇವಿಯರನ್ನು ಆರಾಧಿಸುತ್ತೇವೆ, ಆದರೆ ಮಹಿಳೆಯರನ್ನು ಭೋಗದ ವಸ್ತುಗಳನ್ನಾಗಿ ನೋಡುತ್ತೇವೆ"

Update: 2022-11-05 14:52 GMT

ಪ್ರತಾಪಗಡ (ಉ.ಪ್ರ),ನ.5: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ(gang rape)ವೆಸಗಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳಿಗೆ ಮರಣ ದಂಡನೆಯನ್ನು ವಿಧಿಸಿರುವ ಇಲ್ಲಿಯ ನ್ಯಾಯಾಲಯವು,ತಮ್ಮ ಇಷ್ಟಾರ್ಥ ಸಿದ್ದಿಗಾಗಿ ವಿವಿಧ ದೇವಿಯರನ್ನು ಆರಾಧಿಸುವ ಭಾರತೀಯ ಸಮಾಜವು ಈಗಲೂ ಮಹಿಳೆಯರನ್ನು ಹೇಗೆ ಭೋಗದ ವಸ್ತುಗಳನ್ನಾಗಿ ನೋಡುತ್ತಿದೆ ಎಂಬ ವಿಪರ್ಯಾಸವನ್ನು ಬೆಟ್ಟು ಮಾಡಿದೆ.

ಪೊಕ್ಸೊ ನ್ಯಾಯಾಲಯದ ನ್ಯಾಯಾಧೀಶ ಪಂಕಜ್ ಕುಮಾರ್(Pankaj Kumar) ಶ್ರೀವಾಸ್ತವ ಅವರು ಬುಧವಾರ ಹೊರಡಿಸಿದ ತನ್ನ ಆದೇಶದಲ್ಲಿ,‘ನಮ್ಮ ದೇಶದಲ್ಲಿ ನಾವು ಶಕ್ತಿಗಾಗಿ ದುರ್ಗಾದೇವಿಯನ್ನು, ಸಂಪತ್ತಿಗಾಗಿ ಲಕ್ಷ್ಮಿದೇವಿಯನ್ನು , ಜ್ಞಾನಕ್ಕಾಗಿ ಸರಸ್ವತಿದೇವಿಯನ್ನು ಪೂಜಿಸುತ್ತೇವೆ, ಗಂಗೆಯಂತಹ ನದಿಗಳನ್ನು ನಮ್ಮ ಮಾತೆಯರಂತೆ ಆರಾಧಿಸುತ್ತೇವೆ. ನಾವು ಮಹಿಳೆಯರನ್ನು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲ ಇತ್ಯಾದಿ ಹುದ್ದೆಗಳಿಗೆ ಏರಿಸಿದ್ದೇವೆ. ಇಂತಹ  ದೇಶದಲ್ಲಿ ಅಪ್ರಾಪ್ತ ವಯಸ್ಕ ಬಲಿಪಶುವಿನ ಮೇಲಿನ ಇಂತಹ ಘೋರ ಮತ್ತು ಕ್ರೂರ ಸಾಮೂಹಿಕ ಅತ್ಯಾಚಾರವು ಇಡೀ ಸಮಾಜದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಇರಿಸುತ್ತದೆ ’ಎಂದು ಹೇಳಿದ್ದಾರೆ.

ಸಮಾಜವು ಎಷ್ಟೊಂದು ಸಂಕುಚಿತ ಮನೋಭಾವದಿಂದ ಕೂಡಿದೆಯೆಂದರೆ ತಮ್ಮ ಅಗತ್ಯಗಳಿಗಾಗಿ ಈ ದೇವಿಯರನ್ನು ಪೂಜಿಸುತ್ತಿರುವ ಅವರು ಮಹಿಳೆಯರ ರೂಪದಲ್ಲಿ ನಮ್ಮ ಸುತ್ತಲಿರುವ ದೇವಿಯರನ್ನು ಭೋಗದ ವಸ್ತುಗಳನ್ನಾಗಿ ನೋಡುತ್ತಾರೆ ಮತ್ತು ತಮ್ಮ ಲಾಲಸೆಗಳನ್ನು ತೀರಿಸಿಕೊಳ್ಳಲು ಸಣ್ಣ ಮಕ್ಕಳನ್ನೂ ಬಿಡುವುದಿಲ್ಲ ಎಂದು ನ್ಯಾ.ಶರ್ಮಾ ವಿಷಾದಿಸಿದರು.

ಸಾಮೂಹಿಕ ಅತ್ಯಾಚಾರ,ಅಪಹರಣ,ಕೊಲೆ ಯತ್ನ ಹಾಗೂ ಐಪಿಸಿ ಹಾಗೂ ಪೊಕ್ಸೊ ಕಾಯ್ದೆಯ ವಿವಿಧ ಕಲಮ್ಗಳಡಿ ಆರೋಪಗಳನ್ನು ಮೂವರು ಆರೋಪಿಗಳ ಮೇಲೆ ಹೊರಿಸಲಾಗಿತ್ತು.

ಪ್ರಾಸಿಕ್ಯೂಷನ್ ಪ್ರಕಾರ 2021 ಡಿಸೆಂಬರ್ನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅಪಹರಿಸಿದ್ದ ಮೂವರು ಆರೋಪಿಗಳು ಆಕೆಯನ್ನು ಸಮೀಪದ ರೈಲ್ವೆ ಹಳಿಗಳ ಬಳಿಗೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದರು. ತೀವ್ರ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.
ಬಳಿಕ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು,ಈ ಪೈಕಿ ಓರ್ವ ಅಪ್ರಾಪ್ತ ವಯಸ್ಕನಾಗಿದ್ದ.

ಇಬ್ಬರು ಆರೋಪಿಗಳಿಗೆ ಮರಣದಂಡನೆ ವಿಧಿಸುವಾಗ ಸರ್ವೋಚ್ಚ ನ್ಯಾಯಾಲಯದ ವಿವಿಧ ತೀರ್ಪುಗಳನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಧೀಶರು, ಆರೋಪಿಗಳು ಸಂತ್ರಸ್ತೆಯ ಮುಖವನ್ನು ಸಂಪೂರ್ಣವಾಗಿ ವಿರೂಪಗೊಳಿಸಿ ಶರೀರದ ಇತರ ಭಾಗಗಳಿಗೆ ತೀವ್ರ ಗಾಯಗಳನ್ನುಂಟು ಮಾಡಿದ್ದು ಇದು ‘ಅಪರೂಪದಲ್ಲಿ ಅಪರೂಪದ ’ ಪ್ರಕರಣವಾಗಿದೆ ಎಂದು ಎತ್ತಿಹಿಡಿದರು.

ಆರೋಪಿಗಳು ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವನ್ನು ನಡೆಸಿದ್ದಷ್ಟೇ ಅಲ್ಲ, ಆಕೆಯ ಎಡಗಣ್ಣನ್ನು ಕುರುಡಾಗಿಸಿ ಮುಖವನ್ನು ವಿರೂಪಗೊಳಿಸಿದ್ದಾರೆ. ಸಂತ್ರಸ್ತೆ ತನ್ನನ್ನು ಕನ್ನಡಿಯಲ್ಲಿ ನೋಡಿಕೊಳ್ಳುವಾಗಲೆಲ್ಲ ತಾನು ಈ ಜಗತ್ತಿನಲ್ಲಿ ಏಕಾದರೂ ಹೆಣ್ಣಾಗಿ ಹುಟ್ಟಿದ್ದೇನೋ ಎಂದು ವ್ಯಥೆ ಪಡುತ್ತಾಳೆ. ಜನರು ತಮ್ಮ ಬದುಕಿನಲ್ಲಿ ಒಮ್ಮೆ ಸಾಯುತ್ತಾರೆ. ಆದರೆ ಈ ಸಂತ್ರಸ್ತೆ ಸಾವಿರ ಬಾರಿ,ಲಕ್ಷಗಟ್ಟಲೆ ಬಾರಿ ಸಾಯುತ್ತಿರುತ್ತಾಳೆ ಎಂದು ನ್ಯಾಯಾಧೀಶರು ಹೇಳಿದರು.

ತನ್ನ ಶುದ್ಧತೆಯನ್ನು ಸಾಬೀತುಪಡಿಸಲು ಸೀತಾದೇವಿಯು ಅಗ್ನಿಪರೀಕ್ಷೆಗೆ ಒಳಗಾದಂತೆ ಈ ಸಂತ್ರಸ್ತೆಯು ಪ್ರತಿದಿನ ಅಗ್ನಿಪರೀಕ್ಷೆಗೆ ಒಳಗಾಗುತ್ತಾಳೆ ಎಂದು ಹೇಳಿದ ನ್ಯಾಯಾಧಿಶರು, ಬಾಲಕಿಯು ದುರದೃಷ್ಟಕರ ಘಟನೆಯನ್ನು ಮರೆತು ಉತ್ತಮ ಬದುಕನ್ನು ನಡೆಸಲು ಪ್ರಯತ್ನಿಸುತ್ತಾಳೆ  ಮತ್ತು ಆತ್ಮಹತ್ಯೆಯಂತಹ ಹೇಡಿತನದ ಕೃತ್ಯಕ್ಕೆ ಪ್ರಯತ್ನಿಸುವುದಿಲ್ಲ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಉತ್ತರ ಪ್ರದೇಶ ರಾಣಿ ಲಕ್ಷ್ಮೀಬಾಯಿ ಮಹಿಳಾ ಸಮ್ಮಾನ್ ಕೋಶ ಯೋಜನೆಯ ನಿಯಮಗಳಡಿ ಸಂತ್ರಸ್ತೆಗೆ ಆರ್ಥಿಕ ಪರಿಹಾರವನ್ನು ಪಾವತಿಸುವಂತೆ ಮತ್ತು ಆಕೆಗೆ ಪರಿಹಾರವನ್ನು ಪಾವತಿಸಲಾಗಿದೆಯೇ ಎನ್ನುವುದನ್ನು ಆದೇಶದ ದಿನಾಂಕದ ಒಂದು ತಿಂಗಳೊಳಗೆ ತಿಳಿಸುವಂತೆ ನ್ಯಾಯಾಲಯವು ಪ್ರತಾಪಗಡ ಜಿಲ್ಲಾಧಿಕಾರಿಗಳಿಗೆ ಆದೇಶಿಸಿತು.

Similar News