ಪಂಜಾಬ್ ಬಲಪಂಥೀಯ ನಾಯಕನ ಕೊಲೆ ಆರೋಪಿಗೆ ಏಳು ದಿನಗಳ ಪೊಲೀಸ್ ಕಸ್ಟಡಿ

Update: 2022-11-05 15:06 GMT

ಅಮೃತಸರ,ನ.5: ಶಿವಸೇನಾ (ತಕ್ಸಲಿ) ನಾಯಕ ಸುಧೀರ್ ಸೂರಿ (Sudhir Suri)ಕೊಲೆ ಪ್ರಕರಣದ ಮುಖ್ಯ ಆರೋಪಿಗೆ ಇಲ್ಲಿಯ ನ್ಯಾಯಾಲಯವು ಶನಿವಾರ ಏಳು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ. ಆರೋಪಿ ಸಂದೀಪ್ ಸಿಂಗ್(Sandeep Singh) (31)ನನ್ನು ಬಿಗಿಭದ್ರತೆಯ ನಡುವೆ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.

ಶುಕ್ರವಾರ ನಗರದಲ್ಲಿಯ ಅತ್ಯಂತ ನಿಬಿಡ ಪ್ರದೇಶಗಳಲ್ಲೊಂದಾಗಿರುವ ಮಜಿಥಾ ರಸ್ತೆಯಲ್ಲಿ ಗೋಪಾಲ ಮಂದಿರದ ಆಡಳಿತ ವರ್ಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಹಾಡಹಗಲೇ ಸೂರಿ ಅವರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ರಸ್ತೆಬದಿಯಲ್ಲಿ ಹಿಂದು ದೇವತೆಗಳ ಕೆಲವು ವಿಗ್ರಹಗಳು ಭಗ್ನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಧರ್ಮನಿಂದೆಯ ಕೃತ್ಯವಾಗಿದೆ ಎಂದು ಆರೋಪಿಸಿದ್ದ ಸೂರಿ ಅದನ್ನು ಖಂಡಿಸಿ ಪ್ರತಿಭಟನೆಯಲ್ಲಿ ತೊಡಗಿದ್ದರು.

ಪ್ರತಿಭಟನಾ ಸ್ಥಳದ ಸಮೀಪ ಗಾರ್ಮೆಂಟ್ ಅಂಗಡಿಯನ್ನು ಹೊಂದಿರುವ ಸಿಂಗ್ ನನ್ನು ಬಂಧಿಸಿದ್ದ ಪೊಲೀಸರು ಕೊಲೆ ಕೃತ್ಯಕ್ಕೆ ಬಳಸಿದ್ದ ಪಾಯಿಂಟ್ 32 ಬೋರ್ ನ ಪರವಾನಿಗೆಯಿದ್ದ ಪಿಸ್ತೂಲನ್ನು ವಶಪಡಿಸಿಕೊಂಡಿದ್ದರು. ಯಾವುದೇ ಅಹಿತಕರ ಘಟನೆಯನ್ನು ತಡೆಯಲು ನಗರದ ಹಲವೆಡೆಗಳಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Similar News