ದಿಲ್ಲಿ ಅಬಕಾರಿ ನೀತಿ ಪ್ರಕರಣ: ಮನೀಷ್ ಸಿಸೋಡಿಯಾ ಆಪ್ತ ಸಹಾಯಕನ ನಿವಾಸದ ಮೇಲೆ ಈ.ಡಿ.ದಾಳಿ, ವಿಚಾರಣೆ

Update: 2022-11-05 15:10 GMT

ಹೊಸದಿಲ್ಲಿ,ನ.5: ದಿಲ್ಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಶನಿವಾರ ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ(Manish Sisodia) ಅವರ ಆಪ್ತ ಸಹಾಯಕ ದೇವೇಂದ್ರ ಶರ್ಮಾ ಅಲಿಯಾಸ್ ರಿಂಕು(Devendra Sharma alias Rinku) ನಿವಾಸದ ಮೇಲೆ ದಾಳಿ ನಡೆಸಿದೆ. ಶರ್ಮಾರನ್ನು ಈವರೆಗೆ ಬಂಧಿಸಿಲ್ಲವಾದರೂ,ಅವರ ನಿವಾಸದಲ್ಲಿ ಕೆಲವು ಸೊತ್ತುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಈ ನಡುವೆ ಈ.ಡಿ.ಶರ್ಮಾ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದೆ.

ಆದರೆ ಈ.ಡಿ.ತನ್ನ ಆಪ್ತ ಸಹಾಯಕನನ್ನು ಬಂಧಿಸಿ ಕರೆದೊಯ್ದಿದೆ ಎಂದು ಹೇಳಿರುವ ಸಿಸೋಡಿಯಾ,‘ಸುಳ್ಳು ಎಫ್ಐಆರ್ ಆಧಾರದಲ್ಲಿ ಅವರು ನನ್ನ ನಿವಾಸದ ಮೇಲೆ ದಾಳಿ ನಡೆಸಿದ್ದರು,ಬ್ಯಾಂಕ್ ಲಾಕರ್ಗಳನ್ನು ಶೋಧಿಸಿದ್ದರು,ನನ್ನ ಗ್ರಾಮದಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಿದ್ದರು,‌ ಆದರೆ ಅವರಿಗೆ ನನ್ನ ವಿರುದ್ಧ ಯಾವುದೇ ಪುರಾವೆ ಲಭಿಸಿಲ್ಲ. ಇಂದು ನನ್ನ ಆಪ್ತ ಸಹಾಯಕನ ನಿವಾಸದ ಮೇಲೆ ದಾಳಿ ಸಂದರ್ಭದಲ್ಲಿಯೂ ಅವರಿಗೆ ಏನೂ ಸಿಕ್ಕಿಲ್ಲ. ಹೀಗಾಗಿ ಅವರು ಶರ್ಮಾರನ್ನು ಬಂಧಿಸಿ ಕರೆದೊಯ್ದಿದ್ದಾರೆ ’ಎಂದು ಹೇಳಿದ್ದಾರೆ.

‘ಬಿಜೆಪಿ ಜನರು ಚುನಾವಣೆಯಲ್ಲಿ ಸೋಲಿನ ಬಗ್ಗೆ ಅಷ್ಟೊಂದು ಹೆದರಿಕೊಂಡಿದ್ದಾರೆ ’ಎಂದು ಸಿಸೋಡಿಯಾ ಟ್ವೀಟಿಸಿದ್ದಾರೆ.

2021-22ನೇ ಸಾಲಿಗೆ ಮದ್ಯ ಮಾರಾಟ ಪರವಾನಿಗೆಗಳಿಗಾಗಿ ಟೆಂಡರ್ದಾರರಿಗೆ ಅನುಚಿತ ಲಾಭಗಳನ್ನು ಒದಗಿಸಿದ ಉದ್ದೇಶಪೂರ್ವಕ ಮತ್ತು ಸಮಗ್ರ ಕಾರ್ಯವಿಧಾನ ಲೋಪಗಳಿಗಾಗಿ ಅಬಕಾರಿ ಇಲಾಖೆಯ ಜವಾಬ್ದಾರಿಯನ್ನೂ ಹೊಂದಿರುವ ಸಿಸೋದಿಯಾ ಈ.ಡಿ.ಯ ನಿಗಾದಲ್ಲಿದ್ದಾರೆ.

ಸಿಬಿಐ(CBI) ಎಫ್ಐಆರ್ನ್ನು ಆಧಾರವಾಗಿಟ್ಟುಕೊಂಡು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಈ.ಡಿ. ಸಿಸೋಡಿಯಾರನ್ನು ಆರೋಪಿಗಳಲ್ಲೋರ್ವರನ್ನಾಗಿ ಹೆಸರಿಸಿದೆ.

Similar News