ಇಪಿಎಫ್ ಪಿಂಚಣಿಗೆ ಗರಿಷ್ಠ ವೇತನ ಮಿತಿಯನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್

Update: 2022-11-05 15:48 GMT

ಹೊಸದಿಲ್ಲಿ,ನ.5: 2014ರ ನೌಕರರ ಪಿಂಚಣಿ(Pension) ತಿದ್ದುಪಡಿ (ಯೋಜನೆ) ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ ಹಾಗೂ  ನೌಕರರ ಭವಿಷ್ಯನಿಧಿ ಯೋಜನೆಯಡಿ  ಪಿಂಚಣಿ ಪಡೆಯಲು ಇರುವ 15 ಸಾವಿರ ರೂ.ಗಳ ವೇತನಮಿತಿಯನ್ನು ತೆಗೆದುಹಾಕಿದೆ.

 ಇದಕ್ಕೂ ಮೊದಲು ಮಾಸಿವಾಗಿ 15 ಸಾವಿರಕ್ಕಿಂತ   ಅಧಿಕ ಆದಾಯವನ್ನು ಸಂಪಾದಿಸುವ ಉದ್ಯೋಗಿಗಳು ತಮ್ಮ ವೇತನದ 1.16 ಶೇಕಡ ಹಣವನ್ನು ಇಪಿಎಫ್ ಪಿಂಚಣಿ ಯೋಜನೆಗೆ ದೇಣಿಗೆಯಾಗಿ ನೀಡಬೇಕಾಗಿತ್ತು.

ನೌಕರರು ತಮ್ಮ ವೇತನದ 1.16 ಶೇಕಡ ಹಣವನ್ನು ಇಪಿಎಫ್ ಪಿಂಚಣಿ ನಿಧಿಗೆ ದೇಣಿಗೆಯಾಗಿ ನೀಡುವದು 1952ರ ನೌಕರರ ಭವಿಷ್ಯ ನಿಧಿಗಳು ಹಾಗೂ ಇತರ ವೆಚ್ಚಗಳ ನಿಯಮಗಳ ಕಾಯ್ದೆಯ ಅಧಿಕಾರಕ್ಕೆ ಮೀರಿದ್ದಾಗಿದೆ ಎಂದು ನ್ಯಾಯಾಲಯ ಶುಕ್ರವಾರ ಅಭಿಪ್ರಾಯಿಸಿದೆ.

ಆದಾಗ್ಯೂ ಈ ತೀರ್ಪಿನಲ್ಲಿ ಉಲ್ಲೇಖಿಸಲಾದ ವೇತನ ಮಿತಿಯು 6 ತಿಂಗಳುಗಳ ಬಳಿಕ ಅನುಷ್ಠಾನಕ್ಕೆ ಬರಲಿದೆ. ಸಂಬಂಧಪಟ್ಟ ಪ್ರಾಧಿಕಾರಗಳು ಈ ಯೋಜನೆಗೆ ಹೊಂದಿಕೊಳ್ಳಲು ಹಾಗೂ ಕಾನೂನುಬದ್ಧ ಮೂಲಗಳಿಂದ ಹೆಚ್ಚುವರಿ ದೇಣಿಗೆಗಳನ್ನು ಸೃಷ್ಟಿಸು ಉದ್ದೇಶದಿಂದ  ದೀರ್ಘಾಕಾಲಾವಕಾಶವನ್ನು ನೀಡಲಾಗಿದೆಯೆಂದು ಸುಪ್ರೀಂಕೋರ್ಟ್ ತಿಳಿಸಿದೆ.

2014ರ  ನೌಕರರ ಭವಿಷ್ಯನಿಧಿ  ಯೋಜನೆ (ತಿದ್ದುಪಡಿ) ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾದ ಮೇಲ್ಮನವಿಗಳ ಆಲಿಕೆ ನಡೆಸಿದ ಬಳಿಕ ನ್ಯಾಯಾಲಯ ಈ ಆದೇಶವನ್ನು ಜಾರಿಗೊಳಿಸಿದೆ. 2014ರ ತಿದ್ದುಪಡಿಯನ್ನು ರದ್ದುಗೊಳಿಸಿದ ಕೇರಳ, ರಾಜಸ್ಥಾನ ಹಾಗೂ ದಿಲ್ಲಿ ಹೈಕೋರ್ಟ್ಗಳ ತೀರ್ಪುಗಳನ್ನು ಪ್ರಶ್ನಿಸಿ ಇಪಿಎಫ್ ಹಾಗೂ ಕೇಂದ್ರ ಸರಕಾರವು ಈ ಅರ್ಜಿಯನ್ನು ಸಲ್ಲಿಸಿದ್ದವು.

Similar News