ಗುಜರಾತ್: ಕೈ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ; 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ

Update: 2022-11-05 15:53 GMT

ಹೊಸದಿಲ್ಲಿ,ನ.5: ಗುಜರಾತ್ ವಿಧಾನಸಭಾ ಚುನಾವಣೆಗೆ ತನ್ನ ಪಕ್ಷದ 43 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು  ಪ್ರತಿಪಕ್ಷ ಕಾಂಗ್ರೆಸ್ (Congress)ಶುಕ್ರವಾರ ಪ್ರಕಟಿಸಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್(Bhupendra Patel) ಪ್ರತಿನಿಧಿಸುತ್ತಿರುವ ಘಟ್ಲೋಡಿಯಾ (Ghatlodia)ಕ್ಷೇತ್ರದಿಂದ ರಾಜ್ಯಸಭಾ ಸಂಸದೆ  ಅಮಿ ಯಾಗ್ನಿಕ್(Ami Yagnik) ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ಅರ್ಜುನ್ ಮೋಧವಾಡಿಯಾ(Arjun Modhwadia) ಅವರನ್ನು ಪೋರ್ಬಂದರ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಈ ಕ್ಷೇತ್ರದಲ್ಲಿ ಅವರು 2012 ಹಾಗೂ 2017ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಬಾಬು ಬೊಖಿರಿಯಾ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಕಾಂಗ್ರೆಸ್  ಪಕ್ಷವು ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿರುವ 43 ಕ್ಷೇತ್ರಗಳ ಪೈಕಿ ದಾಹೋದ್ ಜಿಲ್ಲೆಯ ಜಲೋಡ್ (ಪರಿಶಿಷ್ಟ ಮೀಸಲು) ಕ್ಷೇತ್ರ ಮಾತ್ರವೇ ಅದರ ವಶದಲ್ಲಿದೆ.

 ಜಲೋಡ್ ಕ್ಷೇತ್ರದಲ್ಲಿ ಹಾಲಿ ಶಾಸಕ ಭವೇಶ್ ಕಟಾರಾ(Bhavesh Katara) ಬದಲಿಗೆ ಮಿತೇಶ್ ಗರಾಸಿಯಾ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿದೆ. ಗರಾಸಿಯಾ ಅವರು 2012ರಿಂದ 2017ರವರೆಗೆ ಆ ಕ್ಷೇತ್ರದಲ್ಲಿ ಕೈಪಕ್ಷದ ಶಾಸಕರಾಗಿದ್ದರು. ಕಾಂಗ್ರೆಸ್ನ ಮೊದಲ ಪಟ್ಟಿಯಲ್ಲಿ ಯಾಗ್ನಿಕ್ ಸೇರಿದಂತೆ ಏಳು ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ.

ಕೆಲವು ಮಾಜಿ ಶಾಸಕರು ಕೂಡಾ ಈ  ಸಲ ಟಿಕೆಟ್ ಪಡೆಯುವಲ್ಲಿ ಸಫಲರಾಗಿರುವುದು ಗಮನಾರ್ಹವಾಗಿದೆ. ವಡೋದರಾ ಕಾಂಗ್ರೆಸ್ ನಾಯಕ ನರೇಂದ್ರ ರಾವತ್ ಅವರ ಪತ್ನಿ ಹಾಗೂ  ಬಿಜೆಪಿಯ ಆಡಳಿತದ ವಡೋದರಾ ನಗರಪಾಲಿಕೆಯ  ಪ್ರತಿಪಕ್ಷ ನಾಯಕ ಅಮಿ ರಾವತ್ ಅವರನ್ನು ನಗರ ಸಯಾಜಿಗಂಜ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಭಾವನಗರ ಜಿಲ್ಲೆಯ ಮಹುವಾ ಕ್ಷೇತ್ರದ ಮಾಜಿ ಬಿಜೆಪಿ  ಶಾಸಕ  ಕನುಭಾಯಿ ಕಲ್ಸಾರಿಯಾ ಅವರಿಗೆ ಮತ್ತೊಮ್ಮೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆ ಮಾಡಲಾಗಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ರಾಘವ್ ಮಖ್ವಾನಾ ಎದುರು 5 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದರು.

ರಾಜ್ಯದ ಆಡಳಿತಾರೂಢ ಬಿಜೆಪಿಯು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಪ ಪ್ರಕಟಿಸಿಲ್ಲ. ಆದರೆ ರಾಜ್ಯದ ಚುನಾವಣಾ ಕಣಕ್ಕೆ ಹೊಸದಾಗಿ ಪ್ರವೇಶಿಸಿರುವ  ಆಮ್ ಆದ್ಮಿ ಪಕ್ಷವು 118 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು  ಘೋಷಿಸಿದೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಹಾಗೂ 5ರಂದು ಮತದಾನ ನಡೆಯಲಿದೆ ಹಾಗೂ ಡಿ8ರಂದು ಮತಏಣಿಕೆ ನಡೆಯಲಿದೆ.

Similar News