10 ಟನ್‌ ಚಿನ್ನ, 15,900 ಕೋಟಿ ರೂ. ನಗದು: ಆಸ್ತಿ ಘೋಷಿಸಿದ ತಿರುಪತಿ ದೇವಸ್ಥಾನದ ಟ್ರಸ್ಟ್‌

Update: 2022-11-06 11:04 GMT

ಹೈದರಾಬಾದ್: ಶನಿವಾರ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದು, ಸ್ಥಿರ ಠೇವಣಿ ಮತ್ತು ಚಿನ್ನದ ಠೇವಣಿ ಸೇರಿದಂತೆ ತನ್ನ ಆಸ್ತಿಯ ಪಟ್ಟಿಯನ್ನು ಘೋಷಿಸಿದೆ. ಪ್ರಸ್ತುತ ಟ್ರಸ್ಟ್ ಬೋರ್ಡ್ ತನ್ನ ಹೂಡಿಕೆ ಮಾರ್ಗಸೂಚಿಗಳನ್ನು 2019 ರಿಂದ ಬಲಪಡಿಸಿದೆ ಎಂದು ಟಿಟಿಡಿ ಘೋಷಿಸಿದೆ ಎಂದು ndtv.com ವರದಿ ಮಾಡಿದೆ.

ಟಿಟಿಡಿ ಅಧ್ಯಕ್ಷರು ಮತ್ತು ಮಂಡಳಿಯು ಹೆಚ್ಚುವರಿ ಹಣವನ್ನು ಆಂಧ್ರಪ್ರದೇಶ ಸರ್ಕಾರದ ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ ಎಂಬ ಸಾಮಾಜಿಕ ಮಾಧ್ಯಮ ವರದಿಗಳನ್ನು ಟ್ರಸ್ಟ್ ನಿರಾಕರಿಸಿದೆ. ಹೆಚ್ಚುವರಿ ಮೊತ್ತವನ್ನು ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಟ್ರಸ್ಟ್ ಹೇಳಿದೆ. ಪತ್ರಿಕಾ ಪ್ರಕಟಣೆಯಲ್ಲಿ, ಟಿಟಿಡಿ "ಇಂತಹ ಪಿತೂರಿ ಸುಳ್ಳು ಪ್ರಚಾರಗಳನ್ನು ನಂಬಬೇಡಿ ಎಂದು ಶ್ರೀವಾರಿಯ ಭಕ್ತರಲ್ಲಿ ವಿನಂತಿಸಲಾಗಿದೆ. ಟಿಟಿಡಿ ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿದ ನಗದು ಮತ್ತು ಚಿನ್ನದ ಠೇವಣಿಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ಮಾಡಲಾಗುತ್ತದೆ" ಎಂದು ಹೇಳಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ₹ 5,300 ಕೋಟಿಗೂ ಹೆಚ್ಚು ಮೌಲ್ಯದ 10.3 ಟನ್‌ ಚಿನ್ನದ ಠೇವಣಿ ಇದೆ ಎಂದು ದೇವಸ್ಥಾನದ ಟ್ರಸ್ಟ್‌ ತಿಳಿಸಿದೆ. ಇದು ₹ 15,938 ಕೋಟಿ ನಗದು ಠೇವಣಿಯನ್ನೂ ಹೊಂದಿದೆ.

ಟಿಟಿಡಿ ತನ್ನ ಆಸ್ತಿಯ ಒಟ್ಟು ಮೌಲ್ಯವನ್ನು ₹ 2.26 ಲಕ್ಷ ಕೋಟಿ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ದೇವಾಲಯದ ಟ್ರಸ್ಟ್‌ನ ನಿವ್ವಳ ಮೌಲ್ಯ ₹ 2.26 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮ ರೆಡ್ಡಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. "2019 ರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಟಿಟಿಡಿಯ ನಿಶ್ಚಿತ ಠೇವಣಿಗಳ ರೂಪದಲ್ಲಿ 13,025 ಕೋಟಿ ಹೂಡಿಕೆಗಳು 15,938 ಕೋಟಿಗಳಿಗೆ ಏರಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಹೂಡಿಕೆಯು 2,900 ಕೋಟಿಗಳಷ್ಟು ಹೆಚ್ಚಾಗಿದೆ" ಎಂದು ರೆಡ್ಡಿ ಪ್ರಕಟಣೆಗೆ ತಿಳಿಸಿದ್ದಾರೆ.

ಟ್ರಸ್ಟ್ ಹಂಚಿಕೊಂಡ ಬ್ಯಾಂಕ್‌ವಾರು ಹೂಡಿಕೆಯ ಪ್ರಕಾರ, ಟಿಟಿಡಿ 2019 ರಲ್ಲಿ 7339.74 ಟನ್ ಚಿನ್ನದ ಠೇವಣಿ ಹೊಂದಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ 2.9 ಟನ್‌ಗಳನ್ನು ಸೇರಿಸಲಾಗಿದೆ.

Similar News