×
Ad

ಇಮ್ರಾನ್ ಖಾನ್‌ ಮಾಡಿದ ಆರೋಪ ಸಾಬೀತಾದರೆ ರಾಜೀನಾಮೆ ನೀಡುತ್ತೇನೆ: ಪಾಕ್ ಪ್ರಧಾನಿ ಶರೀಫ್

Update: 2022-11-06 23:34 IST

ಇಸ್ಲಮಾಬಾದ್, ನ.6: ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ತನ್ನ ಅಥವಾ ಆಂತರಿಕ ಸಚಿವರ ಪಾತ್ರವಿದೆ ಎಂಬ ಆರೋಪ ಸಾಬೀತಾದರೆ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ರವಿವಾರ ಘೋಷಿಸಿದ್ದಾರೆ.

ತನ್ನ ವಿರುದ್ಧ ಇಮ್ರಾನ್ ಮಾಡಿರುವ ಆರೋಪ ಸಾಬೀತಾದರೆ ದೇಶದ ಪ್ರಧಾನಿಯಾಗುವ ಅಧಿಕಾರವನ್ನು ತಾನು ಕಳೆದುಕೊಳ್ಳುತ್ತೇನೆ. ರಾಷ್ಟ್ರದ ಹಿತದೃಷ್ಟಿಯಿಂದ ಮತ್ತು ಈ ಗೊಂದಲವನ್ನು ಕೊನೆಗೊಳಿಸಲು ಪೂರ್ಣ ನ್ಯಾಯಾಲಯದ ಆಯೋಗವನ್ನು ಸ್ಥಾಪಿಸುವಂತೆ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರನ್ನು ಕೋರುತ್ತೇನೆ. ಇಷ್ಟೆಲ್ಲಾ ಆರೋಪದ ನಂತರವೂ ಸುಪ್ರೀಂಕೋರ್ಟ್ ಸುಮ್ಮನಿದ್ದರೆ ದೇಶಕ್ಕೆ ದೊಡ್ಡ ಹಾನಿಯಾಗುತ್ತದೆ ಎಂದು ಶನಿವಾರ ಲಾಹೋರ್ನಲ್ಲಿ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಶರೀಫ್ ಹೇಳಿದ್ದಾರೆ.

ಖಾನ್ ಪ್ರತಿಪಾದನೆಯ ಬಗ್ಗೆ ತನಿಖೆ ನಡೆಸಲು ಸರಕಾರ ಕಾನೂನು ಮತ್ತು ಸಂವಿಧಾನ ತಜ್ಞರನ್ನು ಒಳಗೊಂಡ ತಂಡವನ್ನು ರಚಿಸಲಿದ್ದು, ಖಾನ್ ಆರೋಪದಲ್ಲಿ ಹುರುಳಿಲ್ಲವೆಂದು ಕಂಡುಬಂದಲ್ಲಿ ಖಾನ್ ಮತ್ತವರ ಸಹವರ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿಯವರ ಕಚೇರಿಯ ಹೇಳಿಕೆ ತಿಳಿಸಿದೆ.

ತನಿಖೆಗೆ ಸ್ವಾಗತ: ಇಮ್ರಾನ್ ಖಾನ್‌ 

ತನ್ನ ಮೇಲಿನ ಹತ್ಯಾಪ್ರಯತ್ನದ ಪ್ರಕರಣದ ಬಗ್ಗೆ ನ್ಯಾಯಾಂಗ ಆಯೋಗದ ತನಿಖೆ ನಡೆಸುವ ಸರಕಾರದ ಪ್ರಸ್ತಾವವನ್ನು ಸ್ವಾಗತಿಸುವುದಾಗಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ರವಿವಾರ ಹೇಳಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಲಾಹೋರ್ ಆಸ್ಪತ್ರೆಯಿಂದ ಸಾಮಾಜಿಕ ಮಾಧ್ಯಮದ ಮೂಲಕ ಮಾತನಾಡಿದ ಇಮ್ರಾನ್, ತನಿಖಾ ಆಯೋಗ ನೇಮಿಸುವ ಸರಕಾರದ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದರು. ಶೀಘ್ರ ಚುನಾವಣೆಗೆ ಆಗ್ರಹಿಸಿ ತನ್ನ ಬೆಂಬಲಿಗರು ರಾಜಧಾನಿ ಇಸ್ಲಮಾಬಾದ್ಗೆ ಆಯೋಜಿಸಿರುವ ದೀರ್ಘ ರ್ಯಾಲಿಯು ತನ್ನ ಮೇಲಿನ ದಾಳಿಯಿಂದ ಸ್ಥಗಿತಗೊಂಡಿದ್ದು ಮಂಗಳವಾರದಿಂದ ಮತ್ತೆ ಮುಂದುವರಿಯಲಿದೆ. ಆದರೆ ಸದ್ಯಕ್ಕೆ ತನಗೆ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು ಎಂದು ಇಮ್ರಾನ್ ಹೇಳಿದ್ದಾರೆ.
 

Similar News