ಉಪಚುನಾವಣೆ: ಬಿಹಾರದಲ್ಲಿ ನಿತೀಶ್ ಕೂಟಕ್ಕೆ ಸೋಲು, ಮುಂಬೈನಲ್ಲಿ ಉದ್ಥವ್ ಠಾಕ್ರೆ ಬಣಕ್ಕೆ ಗೆಲುವು

Update: 2022-11-07 02:09 GMT

ಹೊಸದಿಲ್ಲಿ: ವಿವಿಧ ರಾಜ್ಯಗಳ ಏಳು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡು  ಪ್ರಾಬಲ್ಯ ಮುಂದುವರಿಸಿದೆ. ಆದರೆ ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಬಣ ವಿಭಜನೆಯಾಗಿ ಹೋದರೂ, ಪ್ರಮುಖ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಉದ್ಧವ್ ಠಾಕ್ರೆ ಬಣ ಯಶಸ್ವಿಯಾಗಿದೆ. ಬಿಹಾರದಲ್ಲಿ ಆರ್‍ಜೆಡಿ- ಜೆಡಿಯು ಬಣಕ್ಕೆ ಹಿನ್ನಡೆಯಾಗಿದೆ ಎಂದು ndtv.com ವರದಿ ಮಾಡಿದೆ.

ಉತ್ತರ ಪ್ರದೇಶದ ಗೋಲಾ ಗೋಕರ್ಣನಾಥ್, ಹರ್ಯಾಣದ ಅದಾಂಪುರ, ಬಿಹಾರದ ಗೋಪಾಲ್‍ ಗಂಜ್ ಮತ್ತು ಒಡಿಶಾದ ಧಾಮನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮೊಕಮಾ ಕ್ಷೇತ್ರದಲ್ಲಿ ಅರ್‍ಜೆಡಿ ಗೆದ್ದಿದ್ದರೆ, ತೆಲಂಗಾಣದ ಮುನುಗೋಡು ಕ್ಷೇತ್ರದಲ್ಲಿ ಟಿಆರ್‍ಎಸ್ ಹಾಗೂ ಮುಂಬೈನ ಅಂಧೇರಿ ಪೂರ್ವ ಕ್ಷೇತ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಗೆಲುವು ಸಾಧಿಸಿವೆ, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ.

ಉಪಚುನಾವಣೆಗೆ ಮುನ್ನ ಏಳು ಸ್ಥಾನಗಳ ಪೈಕಿ ಬಿಜೆಪಿ ಮೂರು, ಕಾಂಗ್ರೆಸ್ ಎರಡು, ಶಿವಸೇನೆ ಹಾಗೂ ಆರ್‍ಜೆಡಿ ತಲಾ ಒಂದು ಸ್ಥಾನಗಳನ್ನು ಹೊಂದಿದ್ದವು, ಅಕ್ರಮವಾಗಿ ಬಂದೂಕು ಹೊಂದಿದ್ದ ಆರೋಪದಲ್ಲಿ ಶಾಸಕತ್ವ ಅನರ್ಹಗೊಂಡಿದ್ದ ಮೊಕಾಮಾ ಕ್ಷೇತ್ರದ ಆರ್‍ಜೆಡಿ ಶಾಸಕ ಅನಂತ್ ಸಿಂಗ್ ಅವರ ಪತ್ನಿ ನೀಲಮ್‍ದೇವಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಆರ್‍ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರ ತವರು ಜಿಲ್ಲೆ ಗೋಪಾಲ್‍ಗಂಜ್‍ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ಋತುರಾಜ್ ಲಾಟ್ಕೆ, ಮುಂಬೈನ ಅಂಧೇರಿ ಪೂರ್ವ ಕ್ಷೇತ್ರದಲ್ಲಿ 66 ಸಾವಿರ ಮತಗಳ ಭಾರಿ ಅಂತರದಿಂದ ಗೆದ್ದಿದ್ದಾರೆ. ಒಡಿಶಾದ ಧಾಮ್‍ನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಬಗ್ಗೆ ndtv.com ವರದಿ ಮಾಡಿದೆ.

Similar News