ಉಷ್ಣದ ಹೊಡೆತಕ್ಕೆ ಯೂರೋಪ್‍ನಲ್ಲಿ ಕನಿಷ್ಠ15 ಸಾವಿರ ಮಂದಿ ಬಲಿ: ವಿಶ್ವ ಆರೋಗ್ಯ ಸಂಸ್ಥೆ

Update: 2022-11-08 02:42 GMT

ಕೋಪನ್‍ಹೇಗನ್, ಡೆನ್ಮಾರ್ಕ್: ಯೂರೋಪ್‍ನಲ್ಲಿ ಈ ವರ್ಷ ಇದುವರೆಗೆ ಉಷ್ಣದ ಹೊಡೆತಕ್ಕೆ ಕನಿಷ್ಠ 15 ಸಾವಿರ ಮಂದಿ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization) ಸೋಮವಾರ ಪ್ರಕಟಿಸಿದೆ. ಸ್ಪೇನ್ ಹಾಗೂ ಜರ್ಮನಿಯಲ್ಲಿ ವ್ಯಾಪಕ ಸಾವು ನೋವು ಸಂಭವಿಸಿದೆ ಎಂದು ಹೇಳಿದೆ.

ಜೂನ್‍ನಿಂದ ಆಗಸ್ಟ್‌ವರೆಗಿನ ಮೂರು ತಿಂಗಳು ಯೂರೋಪ್‍ನಲ್ಲಿ ಇದುವರೆಗಿನ ಅತ್ಯಂತ ಉಷ್ಣದ ಅವಧಿಯಾಗಿತ್ತು. ಅತ್ಯಧಿಕ ಉಷ್ಣಾಂಶದಿಂದ ಇಡೀ ಖಂಡದಲ್ಲಿ ಭೀಕರ ಬರಗಾಲದ ಸಾಧ್ಯತೆಯಿದ್ದು, ಮಧ್ಯಪ್ರಾಚೀನ ಯುಗದ ಬಳಿಕ ಇದೇ ಅತ್ಯಂತ ಭೀಕರ ಬರಗಾಲವಾಗಲಿದೆ ಎಂದು WHO ತಜ್ಞರು ಅಂದಾಜಿಸಿದ್ದಾರೆ.

"ದೇಶಗಳು ಇದುವರೆಗೆ ಸಲ್ಲಿಸಿದ ಅಂಕಿ ಅಂಶಗಳ ಪ್ರಕಾರ, ಬಿಸಿಗಾಳಿಯ ಪರಿಣಾಮವಾಗಿ 2022ರಲ್ಲಿ ಕನಿಷ್ಠ 15 ಸಾವಿರ ಮಂದಿ ಮೃತಪಟ್ಟಿದ್ದಾರೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಹನ್ಸ್ ಕ್ಲೂಗ್ ಹೇಳಿದ್ದಾರೆ.

"ಕಳೆದ ಮೂರು ತಿಂಗಳ ಬೇಸಿಗೆಯಲ್ಲಿ ಸ್ಪೇನ್‍ನಲ್ಲಿ ಸುಮಾರು 4 ಸಾವಿರ, ಪೋರ್ಚ್‍ಗಲ್‍ನಲ್ಲಿ 1000, ಬ್ರಿಟನ್‍ನಲ್ಲಿ 3200 ಮಂದಿ ಮತ್ತು ಜರ್ಮನಿಯಲ್ಲಿ ಸುಮಾರು 4500 ಮಂದಿ ಜೀವ ಕಳೆದುಕೊಂಡಿದ್ದಾರೆ" ಎಂದು ವಿವರಿಸಿದ್ದಾರೆ.

ಇನ್ನಷ್ಟು ದೇಶಗಳು ವರದಿ ಸಲ್ಲಿಸಬೇಕಿದ್ದು, ಅಧಿಕ ಸೆಖೆಯಿಂದಾಗಿ ಸಂಭವಿಸಿದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ.

ಬೆಳೆಗಳು ಒಣಗಿದ್ದು, ವ್ಯಾಪಕ ಕಾಳ್ಗಿಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಇದು ಖಂಡದ ವಿದ್ಯುತ್ ಗ್ರಿಡ್ ಮೇಲೆಯೂ ಪರಿಣಾಮ ಬೀರಲಿದೆ. ಜೂನ್ ಹಾಗೂ ಜುಲೈನಲ್ಲಿ ಬ್ರಿಟನ್‍ನಲ್ಲಿ ಇದೇ ಮೊದಲ ಬಾರಿಗೆ ಉಷ್ಣಾಂಶ 40 ಡಿಗ್ರಿ ಸೆಲ್ಷಿಯಸ್‍ಗೆ ಹೆಚ್ಚಿದ್ದು, ಯೂರೋಪ್‍ನಲ್ಲಿ 24 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಉಷ್ಣದ ಒತ್ತಡದಿಂದಾಗಿ ದೇಹ ತಾನಾಗಿಯೇ ತಂಪಾಗುತ್ತಿಲ್ಲ. ಇದರಿಂದಾಗಿ ಹವಾಮಾನ ಸಂಬಂಧಿ ಸಾವುಗಳು ಹೆಚ್ಚುತ್ತಿವೆ ಎಂದು WHO ಹೇಳಿದೆ. ಈ ಬಗ್ಗೆ ndtv.com ವರದಿ ಮಾಡಿದೆ. 

Similar News