ಶ್ರೀಲಂಕಾದಲ್ಲಿ ತೀವ್ರ ಆಹಾರದ ಕೊರತೆ: ವಿಶ್ವಸಂಸ್ಥೆ ಎಚ್ಚರಿಕೆ

Update: 2022-11-08 18:35 GMT

ಕೊಲಂಬೊ, ನ.8: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾದಲ್ಲಿ ಆಹಾರದ ಬಿಕ್ಕಟ್ಟು ಮತ್ತಷ್ಟು ಹೆಚ್ಚಬಹುದು . ಆ ದೇಶದಲ್ಲಿ ತುರ್ತು ಮಾನವೀಯ ನೆರವಿನ ಅಗತ್ಯವಿರುವ ಜನರ ಸಂಖ್ಯೆ ದುಪ್ಪಟ್ಟಾಗಿದ್ದು 3.4 ದಶಲಕ್ಷಕ್ಕೆ ಹೆಚ್ಚಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಎಚ್ಚರಿಕೆ ನೀಡಿದೆ.

22 ದಶಲಕ್ಷ ಜನಸಂಖ್ಯೆಯಿರುವ ದ್ವೀಪರಾಷ್ಟ್ರದಲ್ಲಿ 1.7 ದಶಲಕ್ಷ ಜನರಿಗೆ  ತುರ್ತು ಮಾನವೀಯ ನೆರವಿನ ಅಗತ್ಯವಿದೆ ಎಂದು ಜೂನ್‌ನಲ್ಲಿ ವಿಶ್ವಸಂಸ್ಥೆ ಅಂದಾಜಿಸಿತ್ತು. ಅಗತ್ಯವಿರುವ ಜನರಿಗೆ ಆಹಾರ ಒದಗಿಸಲು  79 ದಶಲಕ್ಷ ಡಾಲರ್ ನಿಧಿ ಸಂಗ್ರಹಿಸಲಾಗಿದೆ. ಆದರೆ ಬಡಜನರ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೆಚ್ಚುವರಿ 70 ದಶಲಕ್ಷ ಡಾಲರ್ ಮೊತ್ತದ ಅಗತ್ಯವಿದೆ. ಎರಡು ನಿರಂತರ ಸೀಸನ್‌ನಲ್ಲಿ ಕಳಪೆ ಫಸಲು, ವಿದೇಶಿ ವಿನಿಮಯ ಕೊರತೆ, ಕುಟುಂಬದ ಖರೀದಿ ಶಕ್ತಿ ಕುಂಠಿತವಾಗಿರುವುದು ಶ್ರೀಲಂಕಾದಲ್ಲಿ ಆಹಾರದ ಅಭದ್ರತೆ ನಾಟಕೀಯವಾಗಿ ಹೆಚ್ಚಲು ಕಾರಣವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಕಳೆದ ವರ್ಷದಿಂದ ಇಂಧನ ಕೊರತೆ, ಆಕಾಶಕ್ಕೆ ತಲುಪಿದ ಹಣದುಬ್ಬರ, ದೈನಂದಿನ ಬಳಕೆಯ ವಸ್ತುಗಳ ಕೊರತೆ ಮತ್ತಿತರ ಕಾರಣಗಳಿಂದ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಎಪ್ರಿಲ್‌ನಲ್ಲಿ 51 ಶತಕೋಟಿ ಡಾಲರ್‌ನಷ್ಟು ವಿದೇಶಿ ಸಾಲವನ್ನು ಮರುಪಾವತಿಸಲು ವಿಫಲವಾಗಿದೆ. ಈಗ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(IMF)ಯಿಂದ 2.9 ಶತಕೋಟಿ ಡಾಲರ್ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ.

ಶ್ರೀಲಂಕಾದಲ್ಲಿ ಕಳೆದ ವರ್ಷ 13.1%ವಿದ್ದ ಬಡತನ ದರ ಈ  ವರ್ಷ 25.6%ಕ್ಕೆ ಏರಿಕೆಯಾಗಿದೆ. ಆದ್ದರಿಂದ ಗರ್ಭಿಣಿಯರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳ ಸಹಿತ 2.1 ದಶಲಕ್ಷ ಮಂದಿಗೆ ಆಹಾರ ಒದಗಿಸುವ ಯೋಜನೆಯನ್ನು, 1.5 ದಶಲಕ್ಷ ರೈತರಿಗೆ ಮತ್ತು ಮೀನುಗಾರರಿಗೆ ಜೀವನೋಪಾಯದ ಬೆಂಬಲವನ್ನು ಒದಗಿಸುವ ಯೋಜನೆಯನ್ನು  ಪರಿಷ್ಕರಿಸಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 

Similar News