11,000 ಕ್ಕೂ ಅಧಿಕ ಮಂದಿಯ ಉದ್ಯೋಗ ಕಡಿತಗೊಳಿಸಿ ʻಕ್ಷಮೆ ಕೋರಿದʼ ಮಾರ್ಕ್‌ ಝುಕರ್ ಬರ್ಗ್

Update: 2022-11-09 13:48 GMT

ಕ್ಯಾಲಿಫೋರ್ನಿಯಾ: ಫೇಸ್ಬುಕ್‌ (Facebook) ಮಾತೃ ಸಂಸ್ಥೆ ಮೆಟಾ (Meta) ಪ್ಲಾಟ್‌ಫಾರ್ಮ್ಸ್‌ ಇಂಕ್.‌ ಮೊದಲ ಬಾರಿಗೆ ನಡೆಸುತ್ತಿರುವ ಪ್ರಮುಖ ಲೇ-ಆಫ್‌ನಲ್ಲಿ 11,000 ಕ್ಕೂ ಅಧಿಕ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಸಿಇಒ ಮಾರ್ಕ್‌ ಝುಕರ್ ಬರ್ಗ್‌ (Mark Zuckerberg) ಹೇಳಿದ್ದಾರೆ.

ಬುಧವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಈ ಮಾಹಿತಿ ನೀಡಲಾಗಿದ್ದು ಸಂಸ್ಥೆಯ ಶೇ 13 ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಹೊಸ ನೇಮಕಾತಿಗಳಿಗೆ ತಡೆಯು ಮೊದಲ ತ್ರೈಮಾಸಿಕದಲ್ಲಿ ಮುಂದುವರಿಯಲಿದೆ ಎಂದು ಸಂಸ್ಥೆ ಹೇಳಿದೆ.

"ಈ ನಿರ್ಧಾರಗಳಿಗೆ ಮತ್ತು ನಾವು ಈ ಹಂತಕ್ಕೆ ಹೇಗೆ ಬಂದೆವು ಎಂಬ ಕುರಿತ ಹೊಣೆಗಾರಿಕೆಯನ್ನು ನಾನು ವಹಿಸಿಕೊಳ್ಳುತ್ತೇನೆ. ಇದು ಎಲ್ಲರಿಗೂ ಕಷ್ಟಕರ ಎಂದು ಗೊತ್ತು, ಬಾಧಿತರಾದವರಿಂದ ಕ್ಷಮೆ ಕೋರುತ್ತೇನೆ,ʼʼ ಎಂದು ಅವರು ಹೇಳಿದ್ದಾರೆ.

ಕಂಪೆನಿಯ ವಿವಿಧ ವಿಭಾಗಗಳಲ್ಲಿ ಉದ್ಯೋಗ ಕಡಿತಗಳು ನಡೆಯಲಿವೆ, ಮೂಲಭೂತ ಸೌಕರ್ಯಗಳ ಮೇಲಿನ ಖರ್ಚು ಕಡಿಮೆಗೊಳಿಸಲಿದೆ ಹಾಗೂ ಕೆಲ ಉದ್ಯೋಗಿಗಳನ್ನು ಡೆಸ್ಕ್‌ ಶೇರಿಂಗ್‌ ಆಧಾರದಲ್ಲಿ ಕೆಲಸ ಮಾಡಿಸಲಾಗುವುದು ಮತ್ತು ಖರ್ಚು-ವೆಚ್ಚ ಕಡಿತಗಳ ಇನ್ನಷ್ಟು ಕ್ರಮಗಳು ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು ಎಂದು ಕಂಪೆನಿ ಹೇಳಿದೆ.

ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್‌ ಸಾಧ್ಯತೆ

Similar News