ಯುರೋಪ್: ಬಿಸಿಗಾಳಿಯಿಂದ 4 ದಶಕದಲ್ಲಿ 1,29,000 ಮಂದಿ ಮೃತ್ಯು; ವರದಿ

Update: 2022-11-09 18:40 GMT

ಬ್ರಸೆಲ್ಸ್, ನ.9: ಯುರೋಪ್ನಲ್ಲಿ 1980ರಿಂದ 2020ರ ಅವಧಿಯಲ್ಲಿ ತೀವ್ರ ಉಷ್ಣಾಂಶ ಮತ್ತು ಬಿಸಿಗಾಳಿಯಿಂದ ಸುಮಾರು 1,29,000 ಮಂದಿ ಮೃತಪಟ್ಟಿದ್ದಾರೆ ಎಂದು ಯುರೋಪ್ ಪರಿಸರ ಸಂಸ್ಥೆ (ಇಇಎ) ಹೇಳಿದೆ.

 ಹವಾಮಾನ ವೈಪರೀತ್ಯದ ಈ ಸಮಸ್ಯೆ ನಿಯಂತ್ರಣಕ್ಕೆ ಯಾವ ಕ್ರಮವನ್ನೂ ಕೈಗೊಳ್ಳದಿದ್ದರೆ ಮತ್ತು ಈಗಿನ 3 ಡಿಗ್ರಿ ಸೆಲ್ಶಿಯಸ್ ಜಾಗತಿಕ ತಾಪಮಾನದ ಪರಿಸ್ಥಿತಿ ಮುಂದುವರಿದರೆ 2,100ರವರೆಗೆ ಪ್ರತೀ ವರ್ಷ 90,000 ಯುರೋಪಿಯನ್ನರು ಸಾವನ್ನಪ್ಪಬಹುದು ಎಂದು ಇಇಎ ಎಚ್ಚರಿಕೆ ನೀಡಿದೆ. ಒಂದು ವೇಳೆ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಶಿಯಸ್ಗೆ ಇಳಿಕೆಯಾದರೆ ಸಾವಿನ ಪ್ರಮಾಣ ವಾರ್ಷಿಕ 30,000ಕ್ಕೆ ಇಳಿಯಬಹುದು. 

ಶಾಖದ ಅಪಾಯದ ಜತೆಗೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯು ಜ್ವರ ಯುರೋಪ್ ಅನ್ನು ಕಾಡಬಹುದು. ಬೆಚ್ಚಗಾಗುತ್ತಿರುವ ಸಮುದ್ರದ ನೀರು, ನಿರ್ದಿಷ್ಟವಾಗಿ ಬಾಲ್ಟಿಕ್ ಸಮುದ್ರದ ಕರಾವಳಿಯುದ್ದಕ್ಕೂ, ಕಾಲರಾವನ್ನು ಉಂಟು ಮಾಡುವ ಬ್ಯಾಕ್ಟೀರಿಯಾಕ್ಕೆ ಹೆಚ್ಚು ಸೂಕ್ತವಾಗಿದೆ. ಹವಾಮಾನ ಬದಲಾವಣೆ, ವಯಸ್ಸಾದ ಜನಸಂಖ್ಯೆ, ಹಾಗೂ ಹೆಚ್ಚಿದ ನಗರೀಕರಣದಿಂದಾಗಿ ಮುಂದಿನ ದಿನದಲ್ಲಿ ತಾಪಮಾನಕ್ಕೆ ಸಂಬಂಧಿಸಿದ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಬಹುದು ಎಂದು ಇಇಎ ಹೇಳಿದೆ.

ಆದರೆ ಯುರೋಪ್ಗೆ ಸಂಬಂಧಿಸಿ ಹೇಳುವುದಾದರೆ, ಬಿಸಿಗಾಳಿಯಿಂದ ಸಂಭವಿಸುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿದೆ. ಪರಿಣಾಮಕಾರಿ ಶಾಖ ಆರೋಗ್ಯ ಕ್ರಿಯಾ ಯೋಜನೆ, ನಗರ ಹಸಿರೀಕರಣ, ಸೂಕ್ತವಾದ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣ ಸೇರಿದಂತೆ ವ್ಯಾಪಕ ಶ್ರೇಣಿಯ ಪರಿಹಾರಗಳನ್ನು ಅನುಷ್ಟಾನಗೊಳಿಸುವ ಅಗತ್ಯವಿದೆ. ಜತೆಗೆ ಕೆಲಸದ ಸಮಯ ಮತ್ತು ಕೆಲಸ ಮಾಡುವ ಪರಿಸ್ಥಿತಿಯನ್ನು ಸರಿಹೊಂದಿಸಬೇಕು ಎಂದು ಇಇಎ ಹೇಳಿದೆ.ತೀವ್ರ ತಾಪಮಾನದಿಂದಾಗಿ ಈ ವರ್ಷ ಯುರೋಪ್ನಲ್ಲಿ ಕನಿಷ್ಟ 15,000 ಮಂದಿ ಮೃತಪಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಹೇಳಿದೆ.

Similar News